ಹುಬ್ಬಳ್ಳಿ: ಕನ್ನಡ ಶಾಲೆಗಳಿಗೆ ಅನುದಾನ ನೀಡಬೇಕೆಂದು ಮುಖ್ಯಮಂತ್ರಿಗೂ ಮನವರಿಕೆ ಮಾಡುವೆ. ಸುಮಾರು 170 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಸರ್ಕಾರಕ್ಕೆ ಇದು ದೊಡ್ಡದಲ್ಲ. ಈ ಕುರಿತು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ನೀಡಿ ಇದಕ್ಕೆ ಪರಿಹಾರ ನೀಡುವ ವಿಶ್ವಾಸವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ನೌಕರರ ಒಕ್ಕೂಟದ ವತಿಯಿಂದ “ನಮ್ಮ ಕನ್ನಡ ಶಾಲೆ ಉಳಿಸಿ ಅಭಿಯಾನ’ ಹಾಗೂ 1995ರ ನಂತರ ಪ್ರಾರಂಭವಾದ ಅನುದಾನ ರಹಿತ ಶಾಲೆ ಕಾಲೇಜುಗಳಿಗೆ ಅನುದಾನ ಪಡೆಯುವ ಉದ್ದೇಶದಿಂದ ಇಲ್ಲಿಯ ಬಿವಿಬಿ ಆವರಣದ ಬಯೋಟೆಕ್ ಹಾಲ್ ನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರೆಲ್ಲ ಸಂಘಟಿತರಾಗಿ ಹೋರಾಟ ಮಾಡಿದರೆ ಖಂಡಿತ ಫಲ ಸಿಗುತ್ತದೆ. ಇದಕ್ಕೆ ನಾನು ಎರಡು ದಶಕದ ಹಿಂದೆ ಶಿಕ್ಷಕರಿಗಾಗಿ ಹೋರಾಡಿ ಸಾಧಿಸಿದ ಜಯವೇ ಸಾಕ್ಷಿ. ಸಾಂವಿಧಾನಿಕ ಹುದ್ದೆಯಲ್ಲಿರುವುದರಿಂದ ಹೋರಾಟದ ಬದಲು ಸಿಎಂಗೆ ಮನವಿ ಮಾಡುತ್ತೇನೆ ಎಂದರು. 29 ವರ್ಷದಿಂದ ಅನುದಾನಕ್ಕಾಗಿ ಹೋರಾಟ ನಡೆಯುತ್ತಿದೆ. ಸರ್ಕಾರಗಳು ಕಣ್ಣು ತೆರೆಯುತ್ತಿಲ್ಲ. ಶಿಕ್ಷಕರೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕು.
ತಮ್ಮೊಂದಿಗೆ ಸ್ವಾಮೀಜಿಗಳನ್ನು ಸೇರಿಸಿಕೊಳ್ಳಿ, ಆಯಾ ತಾಲೂಕಿನ ಪದಾಧಿಕಾರಿಗಳು ಸಂಘಟನೆ ಬಲಪಡಿಸಬೇಕು ಎಂದ ಹೊರಟ್ಟಿ ಅವರು, ಸಭಾಪತಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ನಿಮ್ಮೊಂದಿಗೆ ಹೋರಾಟಕ್ಕೆ ಬಂದು ಬಿಡಬೇಕು ಅನಿಸುತ್ತಿದೆ ಎಂದು ಶಿಕ್ಷಕರ ಬಳಿ ಮನದಾಳ ಹೇಳಿಕೊಂಡರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ರಾಜ್ಯದಲ್ಲಿ ಅನುದಾನ ಇಲ್ಲದೇ ನಡೆಯುತ್ತಿರುವ ಕನ್ನಡ ಶಾಲೆಗಳ ಫಲಿತಾಂಶ ಉತ್ತಮವಾಗಿದೆ. ಇದಕ್ಕೆ ಅಲ್ಲಿನ ಶಿಕ್ಷಕರ ಅಭಿಮಾನ ಕಾರಣ. ಆದರೆ, ಅವರೆಲ್ಲ ಅನುದಾನ ಇಲ್ಲದೇ ಒಪ್ಪತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಎಲ್ಲ ಪರಿಷತ್ ಸದಸ್ಯರನ್ನು ಸೇರಿಸಿಕೊಂಡು ಧ್ವನಿ ಎತ್ತುವ ಕೆಲಸ ಮಾಡಲಾಗುವುದು. ಶಿಕ್ಷಕರ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.
ಕಳೆದ ಹಲವು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯುತ್ತಿಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಸುಮಾರು 60 ಸಾವಿರ ಶಿಕ್ಷಕರ ಕೊರತೆ ಇದೆ. ಕಾಲೇಜುಗಳಲ್ಲಿಯೂ ಅತಿಥಿ ಉಪನ್ಯಾಸಕರೇ ಮುನ್ನಡೆಸುವಂತಾಗಿದೆ. ಈ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಬೊಮ್ಮನಹಳ್ಳಿ ಶಿವಯೋಗೀಶ್ವರ ಸ್ವಾಮೀಜಿ. ಹೊರಟ್ಟಿ ಅವರು ಶಿಕ್ಷಕರ ಜತೆ ಇದ್ದಾರೆ ಎಂದರೆ ಕೆಲಸ ಆಗಲಿದೆ ಎಂಬ ಭರವಸೆ ಮೂಡುತ್ತದೆ. ಕನ್ನಡ ಉಳಿಯಬೇಕಾದರೆ ಸಿಎಂ, ಶಿಕ್ಷಣ ಸಚಿವರು ಸಮಸ್ಯೆಗಳನ್ನು ಕಣ್ಣು ತೆರೆದು ನೋಡಬೇಕು ಎಂದು ಸಲಹೆ ನೀಡಿದರು.
ಒಕ್ಕೂಟದ ಅಧ್ಯಕ್ಷ ಜಿ.ಸಿ. ಶಿವಪ್ಪ ಮಾತನಾಡಿ, ಅನುದಾನರಹಿತ ಶಾಲೆ ಕಾಲೇಜುಗಳಲ್ಲಿ 29 ವರ್ಷದಿಂದ ಸೇವೆ ಸಲ್ಲಿಸುತ್ತ ವೃತ್ತಿಗೆ ಲೋಪ ಆಗದಂತೆ ಕೆಲಸ ಮಾಡಿದ್ದೇವೆ. ಕೆಲವರಿಗೆ ಏಳನೇ ವೇತನ ಸಿಗುತ್ತಿದ್ದರೆ ನಮಗೆ ಒಂದನೇ ವೇತನವೂ ಇಲ್ಲ. ಸಾಹಿತ್ಯ ಸಮ್ಮೇಳನಕ್ಕೆ ನೂರು ಕೋಟಿ ಖರ್ಚು ಮಾಡುವವರು ನಮಗೆ ಒಂದು ಹೊತ್ತಿನ ಊಟ ಹಾಕಲು ತಯಾರಿಲ್ಲ. ಹೊರಟ್ಟಿ ಅವರು ತಮ್ಮ ಸ್ಥಾನದಲ್ಲಿಯೇ ಇದ್ದು, ನಮಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಶ್ರೀಚನ್ನವಿರ ಸ್ವಾಮೀಜಿ, ಶ್ರೀ ಪ್ರಭು ಸ್ವಾಮೀಜಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಎಸ್.ಎಸ್. ಮಠದ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿ.ಎನ್. ಭಟ್ಟ, ಎಂ.ಜಿ. ಕೋರಿಶೆಟ್ಟಿ, ಸಲೀಂ ಕಿತ್ತೂರ, ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಶಿಕ್ಷಕರು, ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.