ಬೆಂಗಳೂರು:- ಸ್ಪರ್ಧಿ ತನಿಷಾ ಕುಪ್ಪಂಡ ಅವರು ಬೋವಿ ಜನಾಂಗದ ಬಗ್ಗೆ ಅವಹೇಳನಕಾರಿ ಪದ ಆಡಿದ್ದಾರೆ ಎಂಬ ಆಪಾದನೆಗೆ ಸಂಬಂಧಿಸಿ ಪೊಲೀಸರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ತನಿಷಾ ಕುಪ್ಪಂಡ ಅವರ ಜತೆಗೆ ಮತ್ತೊಬ್ಬ ಸ್ಪರ್ಧಿ ಡ್ರೋನ್ ಪ್ರತಾಪ್ ಅವರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.
ತನಿಷಾ ಕುಪ್ಪಂದ ಅವರು ಬಿಗ್ ಬಾಸ್ ಮನೆಯಲ್ಲಿ ವಡ್ಡನ ತರ ಆಡಬೇಡ ಎಂದು ಹೇಳಿದ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಕೆಲವೊಂದು ಜಾತಿವಾಚಕ ಶಬ್ದಗಳನ್ನು ನಿಷೇಧಾತ್ಮಕವಾಗಿ ಬಳಸದಂತೆ ಸೂಚಿಸಲಾಗಿದೆ. ಅವುಗಳನ್ನು ವಡ್ಡ ಎನ್ನುವ ಪದವೂ ಸೇರಿದೆ. ಈ ಶಬ್ದದ ನಿಷೇಧಾತ್ಮಕ ಬಳಕೆ ಮೂಲಕ ಬೋವಿ ಜನಾಂಗವನ್ನು ಅಪಮಾನಿಸಲಾಗಿದೆ ಎಂದು ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಎಂಬುವವರು ದೂರು ನೀಡಿದ್ದಾರೆ.
ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪಿ. ಪದ್ಮಾ ಅವರು ದಾಖಲಿಸಿರುವ ದೂರಿನಲ್ಲಿ ‘ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ತನಿಷಾ ಕುಪ್ಪಂಡ ಅವರು ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ. ಈ ಮೂಲಕ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ಅವರನ್ನು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು, ಅವರು ಮತ್ತು ಬಿಗ್ ಬಾಸ್ ಮುಖ್ಯಸ್ಥರು ಕ್ಷಮೆ ಯಾಚಿಸಬೇಕುʼʼ ಎಂದು ಆಗ್ರಹಿಸಲಾಗಿದೆ.
ಈ ದೂರನ್ನು ಆಧರಿಸಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಮಾಗಡಿ ಡಿವೈಎಸ್ಪಿ ಪ್ರವೀಣ್, ಕುಂಬಳಗೋಡು ಇನ್ಸ್ ಪೆಕ್ಟರ್ ಶಿವಾರೆಡ್ಡಿ ನೇತೃತ್ವದ ತಂಡ ರಾಜರಾಜೇಶ್ವರಿ ನಗರದ ಹೊರವಲಯದಲ್ಲಿರುವ ಬಿಗ್ ಬಾಸ್ ಸೆಟ್ಗೆ ಭೇಟಿ ನೀಡಿದ್ದಾರೆ. ಅಲ್ಲಿ ತನಿಷಾ ಕುಪ್ಪಂಡ ಮತ್ತು ಡ್ರೋನ್ ಪ್ರತಾಪ್ ಅವರಿಬ್ಬರನ್ನೂ ವಿಚಾರಣೆ ನಡೆಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ತನಿಷಾ ಅವರ ಧ್ವನಿಯ ಸ್ಯಾಂಪಲ್ ಸಂಗ್ರಹ ಮಾಡಿದ್ದಾರೆ. ಪ್ರೋಮೋದಲ್ಲಿರುವ ಧ್ವನಿಗೂ ದೂರುದಾರರು ನೀಡಿರುವ ಧ್ವನಿಗೂ ಸಂಬಂಧವಿದೆಯಾ ಎಂದು ಪರಿಶೀಲನೆ ನಡೆಸಿದ್ದಾರೆ. ಸಂಭಾಷಣೆ ಕುರಿತಂತೆ ಪ್ರತಾಪ್ ಅವರನ್ನೂ ವಿಚಾರಣೆ ನಡೆಸಿದ್ದಾರೆ.