ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಉದ್ಯಮಿ ರತನ್ ಟಾಟಾ ನಿಧನರಾಗಿ ಒಂದು ವಾರವಾಗಿದೆ. ಇದಾಗಲೇ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ತಮ್ಮದೇ ಆದ ರೀತಿಯಲ್ಲಿ ರತನ್ ಟಾಟಾ ಅವರನ್ನು ಸ್ಮರಿಸಿದ್ದಾರೆ. ಇದೀಗ, ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ತಮ್ಮ ಕುಟುಂಬಕ್ಕೆ ರತನ್ ಅವರು ನೀಡಿರುವ ಕೊಡುಗೆ ಬಗ್ಗೆ ಮಾತನಾಡಿದ್ದಾರೆ.
ರತನ್ ಟಾಟಾ ತಮ್ಮ ಪುತ್ರ ಆಕಾಶ್ ಅಂಬಾನಿಗೆ ಗುರು. ಆಕಾಶ್ಗೆ ಅವರು ಹಲವಾರು ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಇಂಥ ಭಾರತದ ಮಹಾನ್ ಪುತ್ರನನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಟಾಟಾ ಅವರ ನಿಧನ ನಮಗೆಲ್ಲರಿಗೂ ದೊಡ್ಡ ಆಘಾತ ತಂದಿದೆ. ಈ ದುಃಖವನ್ನು ಅನುಭವಿಸುವುದು ಸುಲಭದ ಮಾತಲ್ಲ ಎಂದು ನೀತಾ ಹೇಳಿದರು. ಅವರು ದೂರದೃಷ್ಟಿಯ ಕೈಗಾರಿಕೋದ್ಯಮಿಯಾಗಿದ್ದರು, ಅವರು ಯಾವಾಗಲೂ ಸಮಾಜದ ಒಳಿತಿಗಾಗಿ ಜನರನ್ನು ಚೆನ್ನಾಗಿಡಲು ಪ್ರಯತ್ನಿಸಿದರು ಎಂದು ನಿತಾ ಅಂಬಾನಿ ಟಾಟಾ ಅವರನ್ನು ಸ್ಮರಿಸಿದರು.
ರತನ್ ಟಾಟಾ ಒಡೆತನದ ಟಾಟಾ ಗ್ರೂಪ್ ಹಾಗೂ ಮುಖೇಶ್ ಅಂಬಾನಿ ಒಡೆತನದ ರಿಯಲನ್ಸ್ ಗ್ರೂಪ್ ತಮ್ಮದೇ ಕ್ಷೇತ್ರದಲ್ಲಿ ಮೈಲುಗಲ್ಲು ಸಾಧಿಸಿದೆಯಾದ್ರೂ, ರಿಲಯನ್ಸ್ ಗ್ರೂಪ್ ಗಿಂತ ಟಾಟಾ ಗ್ರೂಪ್ ಒಂದು ಹೆಜ್ಜೆ ಮುಂದಿತ್ತು. ಟೆಲಿಕಾಂ ಕ್ಷೇತ್ರವಾಗಲಿ, ವೈದ್ಯಕೀಯ ಕ್ಷೇತ್ರವಾಗಲಿ ಅಥವಾ ಇನ್ನಾವುದೇ ಆಗಿರಲಿ, ಟಾಟಾ ಗ್ರೂಪ್ ಪ್ರಾಬಲ್ಯ ಹೊಂದಿದೆ.