ಡಾ.ರಾಜ್ ಕುಮಾರ್ ಕುಟುಂಬದ ಪ್ರತಿಯೊಬ್ಬರು ಪರಭಾಷೆಯ ಉತ್ತಮ ಬಾಂದವ್ಯ ಹೊಂದಿದ್ದಾರೆ. ಅದರಲ್ಲೂ ಶಿವರಾಜ್ ಕುಮಾರ್ ಅವರಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಪರಭಾಷೆಯ ಹಲವು ಕಲಾವಿಧರು ಶಾಕ್ ಆಗಿದ್ದರು. ಅಲ್ಲದೆ ಆದಷ್ಟು ಬೇಗ ಶಿವಣ್ಣ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದರು. ಅಂತೆಯೇ ಶಿವರಾಜ್ ಕುಮಾರ್ ಆರೋಗ್ಯದ ಬಗ್ಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ವಿಶೇಷ ಕಾಳಜಿ ವಹಿಸಿದ್ದರು.
ಅಮಿತಾಭ್ ಬಚ್ಚನ್ ಅವರಿಗೆ ಶಿವರಾಜ್ಕುಮಾರ್ ಎಂದರೆ ಅಚ್ಚುಮೆಚ್ಚು. ರಾಜ್ಕುಮಾರ್ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಅಮಿತಾಭ್ಗೆ ವಿಶೇಷ ಪ್ರೀತಿ ಇದೆ. ಶಿವರಾಜ್ಕುಮಾರ್ ಹಾಗೂ ಅಮಿತಾಭ್ ಒಂದೇ ಜ್ಯುವೆಲರಿ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಇದರ ಪ್ರಚಾರಕ್ಕಾಗಿ ಇವರು ಸಾಕಷ್ಟು ಬಾರಿ ಒಟ್ಟಿಗೆ ಸೇರಿದ್ದು ಇದೆ. ಅಮಿತಾಭ್ ಬಚ್ಚನ್ ಅವರು ಮೆಸೇಜ್ ಮೂಲಕ ಶಿವಣ್ಣನ ಆರೋಗ್ಯ ವಿಚಾರಿಸುತ್ತಿದ್ದಾರೆ.
ಜೊತೆಗೆ ಟಾಲಿವುಡ್ ನಟ, ಶಾಸಕ ಬಾಲಕೃಷ್ಣ ಸಹ ಶಿವಣ್ಣ ಆಪ್ತರಿಗೆ ಕರೆ ಮಾಡಿ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಯಶ್, ಸುದೀಪ್ ಮೊದಲಾದವರು ಶಿವರಾಜ್ಕುಮಾರ್ ಅವರ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾರೆ.
ಸದ್ಯ ಶಿವರಾಜ್ಕುಮಾರ್ ವಿಶ್ರಾಂತಿ ಪಡೆಯಲು ಉತ್ತರ ಕನ್ನಡದ ಶಿರಸಿಗೆ ತೆರಳಿದ್ದಾರೆ. ಅಲ್ಲಿ ಅವರ ಸಂಬಂಧಿ ಹಾಗೂ ಶಾಸಕ ಭೀಮಣ್ಣ ಅವರ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ. ಅಲ್ಲೇ ಕೆಲವು ದಿನ ಇದ್ದು ವಿಶ್ರಾಂತಿ ಪಡೆದು ನಂತರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಕನಕಪುರದಲ್ಲಿರುವ ಫಾರ್ಮ್ ಹೌಸ್ಗೆ ಶಿವರಾಜ್ಕುಮಾರ್ ಶಿಫ್ಟ್ ಆಗಲಿದ್ದು ಕೆಲ ದಿನಗಳ ಕಾಲ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ.