ನ್ಯೂ ಆರ್ಲಿನ್ಸ್(ಅಮೆರಿಕ): ಬೌರ್ಬನ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರ ಗುಂಪಿನ ಮೇಲೆ ಟ್ರಕ್ ಹರಿದ ಪರಿಣಾಮ 15 ಜನ ಮೃತಪಟ್ಟಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿವಾಹಿನಿ ಸಿಎನ್ಎನ್ ವರದಿ ಮಾಡಿದೆ.
ಜನರ ಮೇಲೆ ನುಗ್ಗಿದ ವಾಹನದ ಮೇಲೆ ಇಸ್ಲಾಮಿಕ್ ಸ್ಟೇಟ್(ಐಎಸ್) ಭಯೋತ್ಪಾದಕ ಸಂಘಟನೆಯ ಧ್ವಜ ಕಂಡುಬಂದಿದ್ದು ಇದು ಉಗ್ರರ ದಾಳಿ ಎಂದು ಶಂಕಿಸಲಾಗಿದೆ. ಅಲ್ಲದೆ ಎಫ್ಬಿಐ ತನಿಖೆ ಚುರುಕುಗೊಳಿಸಿದ್ದು, ಘಟನೆಯ ಹಿಂದೆ ಯಾವುದಾದರೂ ಭಯೋತ್ಪಾದಕ ಗುಂಪಿನ ಕೈವಾಡವಿದೆಯೇ ಎಂಬ ಕುರಿತು ತನಿಖೆ ನಡೆಸುತ್ತಿದೆ.
ಘಟನೆಯ ಕುರಿತು ಇದುವರೆಗೂ ಯಾವುದೇ ಸಂಘಟನೆ ಹೊಣೆ ಹೊತ್ತಿಲ್ಲ. ವಾಹನದಲ್ಲಿ ಸುಧಾರಿತ ಸಾಧನ, ಕಂಟ್ರಿ ಬಾಂಬ್ಗಳು ಪತ್ತೆಯಾಗಿದ್ದು, ವಾಹನದಲ್ಲಿ ಚಾಲಕ ಮಾತ್ರ ಇದ್ದ ಎಂದು ಎಫ್ಬಿಐ ಮಾಹಿತಿ ನೀಡಿದೆ.
ಫ್ರೆಂಚ್ ಕ್ವಾರ್ಟನ್ನ ಆರ್ಲಿನ್ಸ್ನ ಐತಿಹಾಸಿಕ ಕೇಂದ್ರದ ಸಮೀಪ ಹೊಸ ವರ್ಷ 2025ರ ಸಂಭ್ರಮಾಚರಣೆಯಲ್ಲಿದ್ದ ಸಂದರ್ಭದಲ್ಲಿ ವೇಳೆ ಬೆಳಗಿನ ಜಾವ ಸುಮಾರು 3 ಗಂಟೆಗೆ ಈ ದುರ್ಘಟನೆ ನಡೆದಿದೆ. ಓಪನ್ ಏರ್ ಕನ್ಸರ್ಟ್ನಲ್ಲಿ ಸೇರಿದ್ದ ಜನರ ಮೇಲೆ ವಾಹನ ಹರಿದಿದೆ. ‘ಆಲ್ಸ್ಟೇಟ್ ಶುಗರ್ ಬೌಲ್’ಗಾಗಿ ನಗರಕ್ಕೆ ಬರುತ್ತಿದ್ದ ಕಾಲೇಜು ಫುಟ್ಬಾಲ್ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಶುಗರ್ ಬೌಲ್ ಅಮೆರಿಕದೆಲ್ಲೆಡೆ ನಡೆಯುವ ವಾರ್ಷಿಕ ಕಾಲೇಜು ಫುಟ್ಬಾಲ್ ಆಟವಾಗಿದ್ದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.