ಬೆಂಗಳೂರು;- ರೈತರ ಸಮಸ್ಯೆಗೆ ಸರ್ಕಾರವಾಗಿ ನಿಮ್ಮ ಸಾಧನೆ ಏನು? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ರೈತ ಸಾಂತ್ವನ ಯಾತ್ರೆಯ ಅನುಭವವನ್ನು ಕೇಂದ್ರದ ಜತೆಗೂ ಹಂಚಿಕೊಳ್ಳುತ್ತೇವೆ. ನಿಮಗೆ ಸಂಶಯ ಬೇಡ ಎಂದರು. ಪ್ರತಿಪಕ್ಷಗಳ ಕೆಲಸ ಗುರುತಿಸುವ ನಿಮ್ಮ ʼಹೃದಯ ವೈಶಾಲ್ಯತೆʼಗೆ ನಾನು ಆಭಾರಿ. ರೈತ ಸಾಂತ್ವನಯಾತ್ರೆಯನ್ನು ಸ್ವಾಗತ ಮಾಡಿರುವ ನಿಮ್ಮ ʼದೊಡ್ಡʼ ಗುಣವನ್ನು ಮನಸಾರೆ ಕೊಂಡಾಡುತ್ತೇನೆ.ಜೆಡಿಎಸ್ ಸಲ್ಲಿಸಲಿರುವ ಬರ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದೀರಿ, ಬಹಳ ಸಂತೋಷ.
ರಾಜ್ಯದ ಅಗತ್ಯಗಳಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತಿದೆ? ಅದಕ್ಕೆ ನಿಮ್ಮ ನೇತೃತ್ವದ ಸರ್ಕಾರ ಎಷ್ಟು ʼಗಂಭೀರ(!?)ʼ ಪ್ರಯತ್ನ ಮಾಡಿದೆ, ಮಾಡುತ್ತಿದೆ ಎನ್ನುವುದು ನನಗೂ ತಿಳಿದಿದೆ. ಬರದ ಜತೆಗೆ, ವಿದ್ಯುತ್ ಬಿಕ್ಕಟ್ಟು, ಕಾವೇರಿ ಸಂಕಷ್ಟದ ವಿಷಯದಲ್ಲಿ ನಿಮ್ಮ ಸರಕಾರದ ʼಅಪರಿಮಿತ ಅಸಡ್ಡೆʼಯನ್ನು ಅರಿಯದಷ್ಟು ಮುಗ್ಧನೇ ನಾನು? ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆ ದೇವೇಗೌಡರು ಮತ್ತವರ ಕುಟುಂಬಕ್ಕೆ ಆತ್ಮೀಯತೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ ಎನ್ನುವುದೂ ನಿಜ. ರಾಜ್ಯದ ಹಿತಕ್ಕಾಗಿ ನಾವು ಪ್ರಧಾನಿ ಮುಂದೆಯೂ ದನಿ ಎತ್ತುತ್ತೇವೆ. ಅದು ನಮ್ಮ ಬದ್ಧತೆ. ಆದರೆ ನಿಮಗೆ ರಾಜ್ಯದ ಬರ ಮತ್ತಿತರೆ ಸಂಕಷ್ಟಗಳಿಗಿಂತ ಈ ಮೈತ್ರಿಯೇ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದಂತೆ ತೋರುತ್ತಿದೆ! ಅಲ್ಲವೇ? ಎಂದು ಕೆಣಕಿದ್ದಾರೆ.
ಪ್ರತಿಪಕ್ಷಗಳಾಗಿ ನಮ್ಮ ಪ್ರಯತ್ನ ನಾವು ಮಾಡುತ್ತೇವೆ, ಸರ್ಕಾರವಾಗಿ ನಿಮ್ಮ ಸಾಧನೆ ಏನು? ಎಷ್ಟು ರೈತರಿಗೆ ಬೆಳೆ ವಿಮೆ ಕೊಡಿಸಿದ್ದೀರಿ? ಸರ್ಕಾರದ ವತಿಯಿಂದ ಎಷ್ಟು ಪರಿಹಾರ ನೀಡಿದ್ದೀರಿ? ಅದನ್ನು ಹೇಳಬೇಕೆ ಹೊರತು, ಮಿತ್ರರ ನಡುವೆ ಹುಳಿ ಹಿಂಡುವ ಉಡಾಳತನ ತಮಗ್ಯಾಕೆ? ಎಂದು ಪ್ರಶ್ನಿಸಿದ್ದಾರೆ.
236 ತಾಲೂಕುಗಳಲ್ಲಿ 216 ಬರಪೀಡಿತ ಎಂದು ಲೆಕ್ಕ ಕೊಟ್ಟಿದ್ದೀರಿ. 33,710 ಕೋಟಿ ರೂ. ಮೌಲ್ಯದ ಬೆಳೆಹಾನಿ ಆಗಿದ್ದು, ಕೇಂದ್ರಕ್ಕೆ 17,901 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದೀರಿ, ಸರಿ. ಜತೆಗೆ; 343 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದೂ ತಿಳಿಸಿದ್ದೀರಿ. ಅದನ್ನು ಯಾರಿಗೆ ಹಂಚಿದ್ದೀರಿ?
ಈ ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿ ʼವಿಶ್ವವಿಖ್ಯಾತ ವಿತ್ತತಜ್ಞʼರಾಗಿ ಮೆರೆಯುತ್ತಿರುವವರು ನೀವು. ಅಧಿಕಾರಕ್ಕೆ ಬಂದೊಡನೆ ವಿಶೇಷವಾಗಿ ವಿತ್ತಖಾತೆಯನ್ನು ತಮ್ಮಲ್ಲಿಯೇ ‘ ಜೋಪಾನ ‘ ಮಾಡಿಕೊಳ್ಳುವ ನಿಮಗೆ, ಕೇಂದ್ರ ಸರಕಾರವು ಬರಕ್ಕೆ, ಪ್ರವಾಹಕ್ಕೆ ಯಾವ ರೀತಿ ಪರಿಹಾರ ಕೊಡುತ್ತದೆ ಎನ್ನುವ ಸಾಮಾನ್ಯ ತಿಳಿವಳಿಕೆಯೂ ಇಲ್ಲವೇ?
ಪ್ರಶ್ನಿಸಿದ್ದಾರೆ.