ಟಾಲಿವುಡ್ನ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಇದೀಗ ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ನಾಗಚೈತನ್ಯ ಹಾಗೂ ಶೋಭಿತಾ ಸಂಸಾರದಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿ ಅಕ್ಕಿನೇನಿ ಕುಟುಂಬಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ಯಾರದ್ದೇ ನಟ, ನಟಿಯರ, ರಾಜಕೀಯ ಗಣ್ಯರ ಭವಿಷ್ಯ ಹೇಳುವುದಿಲ್ಲ ಎಂದಿದ್ದ ವೇಣು ಸ್ವಾಮಿ ಇದೀಗ ಅಲ್ಲು ಅರ್ಜುನ್ ಭವಿಷ್ಯ ಹೇಳಿದ್ದಾರೆ.
ವಿಡಿಯೋ ಒಂದರಲ್ಲಿ ಮಾತನಾಡಿರುವ ವೇಣು ಸ್ವಾಮಿ, ‘ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ನೋಡಿಕೊಂಡು ಬಂದೆ ಅಲ್ಲು ಅರ್ಜುನ್ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ಅದ್ಭುತವಾಗಿದ್ದು, ದೇವಿಯ ಆಶೀರ್ವಾದದಿಂದ ಭಾರಿ ಯಶಸ್ಸನ್ನು ಈ ಸಿನಿಮಾ ಪಡೆದುಕೊಳ್ಳಲಿದೆ’ ಎಂದಿದ್ದಾರೆ. ಮುಂದುವರೆದು, ಈ ಸಂದರ್ಭದಲ್ಲಿ ಈ ಹಿಂದೆ ನಾನು ಅಲ್ಲು ಅರ್ಜುನ್ ಬಗ್ಗೆ ಹೇಳಿರುವ ಭವಿಷ್ಯವನ್ನು ನೋಡಿ ಎಂದು ಹೇಳಿ, ವೇಣು ಸ್ವಾಮಿ, ಈ ಹಿಂದೆ ಕೆಲ ಯೂಟ್ಯೂಬ್ ಚಾನೆಲ್ಗಳಲ್ಲಿ ಅಲ್ಲು ಅರ್ಜುನ್ ಬಗ್ಗೆ ನುಡಿದಿರುವ ಭವಿಷ್ಯದ ವಿಡಿಯೋ ಹಾಕಿದ್ದಾರೆ.
ಹಳೆಯ ವಿಡಿಯೋಗಳಲ್ಲಿ ವೇಣು ಸ್ವಾಮಿ, ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ನಿಜವಾದ ಪ್ಯಾನ್ ಇಂಡಿಯಾ ಸ್ಟಾರ್. ಅವರ ಅದೃಷ್ಟ ಇನ್ನೂ ಹತ್ತು ವರ್ಷಗಳ ಕಾಲ ಹೀಗೆಯೇ ಇರಲಿದೆ. ತೆಲುಗು ಚಿತ್ರರಂಗದ ಪ್ರಸ್ತುತ ಸ್ಟಾರ್ ನಟರ ಪೈಕಿ ಅಲ್ಲು ಅರ್ಜುನ್ ಜಾತಕ ಅದ್ಭುತವಾಗಿದೆ. ಅವರು 100 ಕೋಟಿ ಸಂಭಾವನೆ, 500 ಕೋಟಿ ಕಲೆಕ್ಷನ್ ಮೂಲಕ ಮುಂದೆ ಸಾಗುತ್ತಿದ್ದಾರೆ, ಇನ್ನೂ ಹಲವು ವರ್ಷ ಹೀಗೆಯೇ ಇರಲಿದೆ. ಅವರ ಮೇಲೆ ಬಂಡವಾಳ ಹಾಕಿದವರಿಗೆ ನಷ್ಟ ಆಗುವುದೇ ಇಲ್ಲ ಎಂದೆಲ್ಲ ಹೇಳಿದ್ದರು. ಹಲವು ಸಂದರ್ಶನಗಳಲ್ಲಿ ವೇಣು ಸ್ವಾಮಿ, ಅಲ್ಲು ಅರ್ಜುನ್ ಅದೃಷ್ಟವಂತರೆಂದು, ಅವರಿಗೆ ಮುಂದಿನ ಹತ್ತು ವರ್ಷಗಳ ಕಾಲ ಸೋಲು ಇಲ್ಲವೆಂದು ಹೇಳಿದ್ದಾರೆ.
ಅಸಲಿಗೆ ಕಳೆದ ಸುಮಾರು ಆರೇಳು ವರ್ಷದಿಂದ ಅಲ್ಲು ಅರ್ಜುನ್ ಸಿನಿಮಾಗಳು ಸೋಲು ಕಂಡಿಲ್ಲ. ಅದರಲ್ಲೂ 2020 ರ ಬಳಿಕ ಅಲ್ಲು ಅರ್ಜುನ್ ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಎನಿಸಿಕೊಂಡಿವೆ. 2020 ರಲ್ಲಿ ಬಿಡುಗಡೆ ಆದ ‘ಅಲಾ ವೈಕುಂಟಪುರಂಲೋ’, ‘ಪುಷ್ಪ’ ಈಗ ಬಿಡುಗಡೆ ಆಗಿರುವ ‘ಪುಷ್ಪ 2’ ಸಿನಿಮಾ ಭಾರಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ.
ವೇಣು ಸ್ವಾಮಿ ಟಾಲಿವುಡ್ನ ಸೆಲೆಬ್ರಿಟಿ ಜ್ಯೋತಿಷಿಯಾಗಿದ್ದು ಹಲವು ರಾಜಕಾರಣಿಗಳು, ಸಿನಿಮಾ ನಟ-ನಟಿಯರಿಗೆ ವಿಶೇಷ ಪೂಜೆಗಳನ್ನು ಮಾಡಿಸಿದ್ದಾರೆ. ಹಲವು ಸೆಲೆಬ್ರಿಟಿಗಳ ಜ್ಯೋತಿಷ್ಯವನ್ನು ಸಹ ವೇಣು ಸ್ವಾಮಿ ಹೇಳಿದ್ದಾರೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರು ವೇಣು ಸ್ವಾಮಿ ಬಳಿ ಪೂಜೆ ಮಾಡಿಸಿ ಯಶಸ್ಸು ಪಡೆದಿದ್ದಾರೆ.