ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಗಾಯಗೊಂಡಿರುವ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಮಧ್ಯೆ ಗಾಯಗೊಂಡಿರುವ ಬಾಲಕನ ಭೇಟಿಯಾಗಿ ನಟ ಅಲ್ಲು ಅರ್ಜುನ್ ಪ್ರಯತ್ನಿಸಿದ್ದು ಇದಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದಾರೆ.
ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ನಿಧನ ಹೊಂದಿದ್ದು ಅವರ ಪುತ್ರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾನೆ. ಘಟನೆ ನಡೆದಾಗಿನಿಂದಲೂ ಐಸಿಯುನಲ್ಲಿಯೇ ಇರುವ ಬಾಲಕ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಜೈಲಿನಿಂದ ಹೊರಬಂದ ಬಳಿಕ ಅಲ್ಲು ಅರ್ಜುನ್, ಆ ಬಾಲಕನ ಭೇಟಿಯಾಗಲು ಯತ್ನಿಸಿದ್ದಾರೆ ಆದರೆ ಅದಕ್ಕೆ ಪೊಲೀಸರು ನಿರಾಕರಿಸಿದ್ದಾರೆ.
ಬಾಲಕ ದಾಖಲಾಗಿರುವ ಆಸ್ಪತ್ರೆಯು ರಾಂಗೊಪಾಲ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತಿದ್ದು, ರಾಂಗೊಪಾಲ್ ನಗರ ಪೊಲೀಸರು ಅಲ್ಲು ಅರ್ಜುನ್ ಬಾಲಕನ ಭೇಟಿಗೆ ಆಸ್ಪತ್ರೆಗೆ ಬರುಬಾರದು ಎಂದು ನೊಟೀಸ್ ನೀಡಿದ್ದಾರೆ. ಅಲ್ಲು ಅರ್ಜುನ್ ಆಸ್ಪತ್ರೆಗೆ ಬಂದರೆ ಜನ ಜಂಗುಳಿ ಹೆಚ್ಚಾಗುತ್ತದೆ. ನೂಕಾಟ-ತಳ್ಳಾಟ ಉಂಟಾಗಬಹುದು, ಇದರಿಂದ ಇತರೆ ರೋಗಿಗಳಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣ ನೀಡಿ ಅಲ್ಲು ಅರ್ಜುನ್ ಗಾಯಗೊಂಡ ಬಾಲಕನನ್ನು ಭೇಟಿ ಆಗದಂತೆ ಪೊಲೀಸರು ತಡೆದಿದ್ದಾರೆ.
ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಬಂಧನವಾದಾಗ ಮೊದಲಿಗೆ ಅಲ್ಲು ಅರ್ಜುನ್ಗೆ ತೆಲಂಗಾಣ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಸಿಕ್ಕಿತ್ತು. ಅದಾದ ಬಳಿಕ ನಾಂಪಲ್ಲಿ ನ್ಯಾಯಾಲಯದಲ್ಲಿ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಎರಡು ದಿನದ ಹಿಂದೆ ಅಲ್ಲು ಅರ್ಜುನ್ಗೆ ಜಾಮೀನು ದೊರೆತಿದೆ. ನಾಂಪಲ್ಲಿ ನ್ಯಾಯಾಲಯಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್ ಷರತ್ತುಗಳನ್ನು ಪೂರೈಸಿ ಜಾಮೀನು ಪಡೆದಿದ್ದಾರೆ.