ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿತದಿಂದ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ನಟ ಅಲ್ಲು ಅರ್ಜುನ್ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಆ ಬಳಿಕ ಅಲ್ಲು ಅರ್ಜುನ್ ವಿರುದ್ಧ ಸಾಕಷ್ಟು ಜನರು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮಿತಿ ಮೀರಿದ ವರ್ತನೆ ತೋರುತ್ತಿದ್ದು ಅವರಿಗೆ ಅಲ್ಲು ಅರ್ಜುನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಕ್ಕೆ ಅನೇಕರಿಗೆ ಕೋಪ ಬಂತು. ಹಾಗಾಗಿ ತೆಲಂಗಾಣ ಸರ್ಕಾರದ ವಿರುದ್ಧ ಹಲವರು ಕಿಡಿಕಾರಿದರು. ಅದರ ಜೊತೆಗೆ ಕೆಲವರು ಅಶ್ಲೀಲ ಪದ ಬಳಕೆ ಕೂಡ ಮಾಡಿದ್ದಾರೆ. ಇದನ್ನು ಅಲ್ಲು ಅರ್ಜುನ್ ಅವರು ಖಂಡಿಸುತ್ತಿದ್ದಾರೆ. ಯಾರೂ ಕೂಡ ಅಸಭ್ಯವಾಗಿ ಪೋಸ್ಟ್ ಮಾಡಬಾರದು ಎಂದು ಅಲ್ಲು ಅರ್ಜುನ್ ಮನವಿ ಮಾಡಿಕೊಂಡಿದ್ದಾರೆ.
‘ನಿಮ್ಮ ಭಾವನೆಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಿ ಎಂದು ನಾನು ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಯಾವುದೇ ರೀತಿಯ ಅಸಭ್ಯ ಭಾಷೆ ಬಳಸಬೇಡಿ’ ಎಂದು ಅಭಿಮಾನಿಗಳಿಗೆ ಅಲ್ಲ ಅರ್ಜುನ್ ಅವರು ಕಿವಿಮಾತು ಹೇಳಿದ್ದಾರೆ. ಅದೇ ರೀತಿ, ನಕಲಿ ಖಾತೆಯಲ್ಲಿ ಇಂಥ ಕೆಲಸ ಮಾಡುವವರಿಗೆ ವಾರ್ನಿಂಗ್ ನೀಡಿದ್ದಾರೆ.
‘ನಕಲಿ ಖಾತೆಗಳ ಮೂಲಕ ನನ್ನ ಅಭಿಮಾನಿಗಳು ಎಂದು ಹೇಳಿಕೊಂಡು ಯಾರಾದರೂ ಅಶ್ಲೀಲ ಭಾಷೆ ಬಳಕೆ ಮಾಡಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂಥ ಪೋಸ್ಟ್ಗಳ ಕಡೆಗೆ ಗಮನ ಕೊಡಬಾರದು ಎಂದು ಅಭಿಮಾನಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ’ ಎಂದು ಅಲ್ಲು ಅರ್ಜುನ್ ಅವರು ಇನ್ಸ್ಟಾಗ್ರಾಮ್ ಮತ್ತು ‘ಎಕ್ಸ್’ (ಟ್ವಿಟರ್) ಖಾತೆ ಮೂಲಕ ಪೋಸ್ಟ್ ಮಾಡಿದ್ದಾರೆ.