ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಕಾಲ್ತುಳಿತದಿಂದ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ಅಲ್ಲು ಅರ್ಜುನ್ ಬಂಧನ ಟಾಲಿವುಡ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಕೆಳ ಹಂತದ ಕೋರ್ಟ್ ಅವರಿಗೆ 14 ದಿನ ನ್ಯಾಯಂಗ ಬಂಧನ ವಿಧಿಸಿದರೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದರೆ, ಕೋರ್ಟ್ ಪ್ರತಿ ಜೈಲು ಸೇರದ ಹಿನ್ನೆಲೆಯಲ್ಲಿ ಅವರ ಬಿಡುಗಡೆ ತಡವಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿಯಿಡೀ ಜೈಲಿನಲ್ಲೇ ಕಳೆದ ಅಲ್ಲು ಅರ್ಜುನ್ ಇಂದು ಮುಂಜಾನೆಯೇ ಬಿಡುಗಡೆಗೊಂಡು ಮನೆ ಸೇರಿದ್ದಾರೆ.
ಸಂಧ್ಯಾ ಥಿಯೇಟರ್ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಆರೋಪಿ ಸ್ಥಾನದಲ್ಲಿ ಇರಿಸಿದ್ದಾರೆ. ‘ಪುಷ್ಪ 2’ ಚಿತ್ರದ ಪ್ರೀಮೀಯರ್ ಪ್ರದರ್ಶನದ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್ಗೆ ಹೋಗಿದ್ದರು. ಅಲ್ಲು ಅರ್ಜುನ್ ಆಗಮನದಿಂದ ಅಭಿಮಾನಿಗಳು ಒಮ್ಮೆಲೇ ಮುಗಿಬಿದ್ದರು. ಈ ಕಾರಣಕ್ಕೆ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ಸಾವನ್ನಪ್ಪಿದ್ದರು. ಅವರ ಮಗನಿಗೆ ಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿ ರೇವತಿ ಪತಿ ದೂರು ಮಾಡಿದ್ದರು. ಈ ಬೆನ್ನಲ್ಲೇ ಎಫ್ಐಆರ್ ದಾಖಲಿಸಿರುವ ಪೊಲೀಸರು, ಅಲ್ಲು ಅರ್ಜುನ್ ಅವರನ್ನು ಎ11 ಆರೋಪಿ ಆಗಿ ಮಾಡಿದ್ದು ನಿನ್ನೆ ಬೆಳಗ್ಗೆಯೇ ಅಲ್ಲು ಅರ್ಜುನ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದರು.
ಈ ಘಟನೆ ಅವರ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಈ ಘಟನೆಗೆ ಸಂಬಂಧಿಸಿ ಅವರ ಫ್ಯಾನ್ಸ್ ನಿರಂತರವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ‘ಈ ಘಟನೆಯಲ್ಲಿ ಅಲ್ಲು ಅರ್ಜುನ್ ಎ11 ಆರೋಪಿ. ಉಳಿದರ ವಿರುದ್ಧ ಕ್ರಮ ಕೈಗೊಳ್ಳುವುದರ ಬದಲು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದೇಕೆ’ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಒಟ್ನಲ್ಲಿ ಪುಷ್ಪ 2 ಸಕ್ಸಸ್ ಖುಷಿಯಲ್ಲಿದ್ದ ಬನ್ನಿ ಫ್ಯಾನ್ಸ್ ಗೆ ಈ ಪ್ರಕರಣ ದೊಡ್ಡ ಶಾಕ್ ನೀಡಿದೆ.