ಡಿಸೆಂಬರ್ 4ರಂದು ಪುಷ್ಪ-2 ಸಿನಿಮಾದ ಪ್ರೀಮಿಯರ್ ನೋಡಲು ಬಂದಿದ್ದ ರೇವತಿ ಎನ್ನುವ ಮಹಿಳೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ರು. ಈ ಕೇಸ್ಗೆ ಸಂಬಂಧಿಸಿದಂತೆ ಡಿ.13ರಂದು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದು ಬಂಧನದ ದಿನವೇ ಜಾಮೀನು ನೀಡಲಾಗಿತ್ತು. ಇಂದು ಬೆಳ್ಳಂಬೆಳಗ್ಗೆಯೇ ಅಲ್ಲು ಅರ್ಜುನ್ ಜೈಲಿನಿಂದ ಹೊರ ಬಂಧು ಮನೆ ಸೇರಿದ್ದಾರೆ, ಅಲ್ಲು ಅರ್ಜುನ್ ಬಿಡುಗಡೆಯಾಗಿ ಮನೆಗೆ ಬರ್ತಿದ್ದಂತೆ ಸಂಬಂಧಿಕರು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ಹಲವು ಗಣ್ಯರು ನಟನನ್ನು ಭೇಟಿಯಾಗಲು ಅಲ್ಲು ನಿವಾಸಕ್ಕೆ ಆಗಮಿಸಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕೂಡ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದು ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ಸನ್ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ಉಪ್ಪಿ ಒಟ್ಟಿಗೆ ನಟಿಸಿದ್ದರು. ಯುಐ ಸಿನಿಮಾ ಪ್ರಮೋಷನ್ ಇದೀಗ ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದು, ನಟ ಉಪೇಂದ್ರ ಸೇರಿದಂತೆ ಇಡೀ ಚಿತ್ರತಂಡ ಹೈದರಾಬಾದ್ನಲ್ಲಿದೆ. ಟಾಲಿವುಡ್ನಲ್ಲೂ UI ಸಿನಿಮಾ ಭರ್ಜರಿ ಓಪನಿಂಗ್ ಪಡೆಯೋ ನಿರೀಕ್ಷೆಯಲ್ಲಿದೆ. ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಉಪೇಂದ್ರ ಆಂಧ್ರ ಹಾಗೂ ತೆಲಂಗಾಣ ಎರಡು ರಾಜ್ಯಗಳ ಜನರಿಗೂ ಚಿರಪರಿಚಿತರಾಗಿದ್ದಾರೆ.
UI ಚಿತ್ರದ ತೆಲುಗು ವಿತರಣೆ ಹಕ್ಕನ್ನು ಅಲ್ಲು ಅರವಿಂದ್ ಮಾಲೀಕತ್ವದ ಮೈತ್ರಿ ಮೂವಿ ಮೇಕರ್ಸ್ ಖರೀದಿಸಿದೆ. ಹೀಗಾಗಿ ನಟ ಅಲ್ಲು ಅರ್ಜುನ್ ಕೂಡ ಯುಐ ಸಿನಿಮಾಗೆ ಬೆಂಬಲ ನೀಡ್ತಿದ್ದಾರೆ. ಯುಐ ಸಿನಿಮಾ ಪ್ರಚಾರದಲ್ಲು ಬನ್ನಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಅಲ್ಲು ಅರ್ಜುನ್ ಅವರನ್ನು ಶನಿವಾರ ಬೆಳಗ್ಗೆ ಬಿಡುಗಡೆ ಮಾಡಲಾಯ್ತು. ಬನ್ನಿ ತನ್ನ ತಂದೆಯೊಂದಿಗೆ ನೇರವಾಗಿ ಗೀತಾ ಆರ್ಟ್ಸ್ ಕಛೇರಿಗೆ ಹೋಗಿ ಅಲ್ಲಿಂದ ಮನೆಗೆ ತಲುಪಿದ್ರು. ಅಲ್ಲು ಅರ್ಜುನ್ ಮನೆಗೆ ಬರ್ತಿದ್ದಂಗೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.