‘ಪುಷ್ಪ 2’ ಸಿನಿಮಾದ ಪ್ರೀಮಿಯರ್ ವೇಳೆ ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಮೃತಪಟ್ಟಿದ್ದು ಆಕೆಯ ಮಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಘಟನೆ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ ಜಾಮೀನಿನ ಮೇಲೆ ಬಿಡುಗಡ ಮಾಡಲಾಗಿದೆ. ಈ ಪ್ರಕರಣದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೈವಾಡ ಇದೆ ಎನ್ನಲಾಗಿತ್ತು. ಈ ವಿಚಾರ ಚರ್ಚೆಯಲ್ಲಿ ಇರುವಾಗಲೇ ಅವರು ಅಲ್ಲು ಅರ್ಜುನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚೆಗೆ ರೇವಂತ್ ರೆಡ್ಡಿ ಅಲ್ಲು ಅರ್ಜುನ್ ಬಂಧಿಸಿದ್ದ ಪೊಲೀಸ್ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ‘ಅಲ್ಲು ಅರ್ಜುನ್ ಯುದ್ಧ ಗೆದ್ದಿಲ್ಲ. ಸಿನಿಮಾ ಮಾಡಿ ಹಣ ಮಾಡಿಕೊಂಡಿದ್ದಾರೆ ಅಷ್ಟೇ’ ಎಂದು ನೇರಮಾತುಗಳಲ್ಲಿ ಹೇಳಿದ್ದಾರೆ. ಅಲ್ಲದೆ, ಸಂತ್ರಸ್ತ ಕುಟುಂಬದ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.
‘ಇದು ಪಕ್ಕಾ ಉದ್ಯಮ. ಅವರು ಪಾಕಿಸ್ತಾನ-ಭಾರತ ಗಡಿಯಲ್ಲಿ ಯುದ್ಧ ಗೆದ್ದು ಬಂದಿಲ್ಲ. ಅವರು ಸಿನಿಮಾ ಮಾಡಿ, ಹಣ ಮಾಡಿಕೊಂಡು ಮನೆಗೆ ಹೋಗಿದ್ದಾರೆ ಅಷ್ಟೇ’ ಎಂದು ಅವರು ‘ಆಜ್ ತಕ್ ಅಜೆಂಡಾ’ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
‘ವ್ಯಕ್ತಿಯೊಬ್ಬರನ್ನು ಪೊಲೀಸರು ಕರೆದುಕೊಂಡು ಹೋಗಿದ್ದರ ಬಗ್ಗೆ ಇಷ್ಟು ದೊಡ್ಡ ಚರ್ಚೆ ಮಾಡುತ್ತಿದ್ದೀರಲ್ಲ. ಒಂದು ಪ್ರಾಣ ಹೋಗಿರುವ ಬಗ್ಗೆ ಯಾರಿಗೂ ಚಿಂತೆ ಇಲ್ಲ. ಪರಿವಾರ ಹೇಗಿದೆ ಎಂದು ಯಾರೂ ಕೇಳಿಲ್ಲ. ಅವರ ಮಗ ಆಸ್ಪತ್ರೆಯಲ್ಲಿ ಇದ್ದಾನೆ. ಅವನು ಕೋಮಾದಿಂದ ಹೊರ ಬಂದರೆ ಮುಂದೆ ಹೇಗೆ ಜೀವನ ನಡೆಸಿಕೊಂಡು ಹೋಗುತ್ತಾನೆ ಎಂಬ ಬಗ್ಗೆ ಯಾರೂ ಚಿಂತಿಸಲ್ಲ’ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಅಂದ ಹಾಗೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿಗೆ ರೇವಂತ್ ರೆಡ್ಡಿಗೆ ಸಂಬಂಧಿಯಂತೆ. ಆದರೆ, ಈ ವಿಚಾರದಲ್ಲಿ ಅವರು ಸಂಬಂಧವನ್ನು ನೋಡಿಲ್ಲ.