ಬೆಂಗಳೂರು:- ಅನಧಿಕೃತ ಪಟಾಕಿ ಮಳಿಗೆ ತೆರೆಯಲು ಅವಕಾಶ ನೀಡಿದ ಆರೋಪದ ಹಿನ್ನೆಲೆ, ಜೆ.ಬಿ.ನಗರ ಇನ್ಸ್ಪೆಕ್ಟರ್ ರನ್ನು ಸಸ್ಪೆಂಡ್ ಮಾಡಲಾಗಿದೆ.
ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಜಿ.ಬಿ.ನಗರ ಪೊಲೀಸ್ ಠಾಣೆಗೆ ಇನ್ಸ್ಪೆಕ್ಟರ್ ಆಗಿ ಬಸವರಾಜ್ ಅವರು ಅಧಿಕಾರ ಸ್ವೀಕರಿಸಿದ್ದರು. ದೀಪಾವಳಿ ಹಿನ್ನೆಲೆಯಲ್ಲಿ ನಗರದಲ್ಲಿ ಅನಧಿಕೃತವಾಗಿ ಪಟಾಕಿ ಮಳಿಗೆ ಮಾಲೀಕರಿಗೆ ಮಾರಾಟಕ್ಕೆ ಅನುಮತಿ ನೀಡಬಾರದು. ಒಂದು ವೇಳೆ ಕಾನೂನುಬಾಹಿರವಾಗಿ ಪಟಾಕಿ ಮಾರಾಟ ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಯುಕ್ತರು ತಾಕೀತು ಮಾಡಿದ್ದರು.
ಜೀವನಭೀಮಾನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಅನುಮತಿ ಇಲ್ಲದೇ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಕಂಡುಬಂತು. ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಇನ್ಸ್ಪೆಕ್ಟರ್ ಬಸವರಾಜ್ ಅವರು ನಿರ್ಲಕ್ಷ್ಯವಹಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನ ಸಸ್ಪೆಂಡ್ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.