ದಾವಣಗೆರೆ: ಅಪ್ರಾಪ್ತ ಬಾಲಕಿ ಅಪಹರಣ ಮಾಡಿ ಅತ್ಯಾಚಾರ ಮಾಡಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 20 ವರ್ಷ ಶಿಕ್ಷೆ ಹಾಗೂ 17 ಸಾವಿರ ರೂಪಾಯಿ ದಂಡ ವಿಧಿಸಿ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-1 ಕೋರ್ಟ್ ತೀರ್ಪು ನೀಡಿದೆ. ಗುತ್ತೂರು ಗ್ರಾಮದ ನಿವಾಸಿ ಸಾಧಿಕ್ ಅಲಿ ಶಿಕ್ಷೆಗೊಳಪಟ್ಟ ಅಪರಾಧಿ. ಹರಿಹರ ಸಮೀಪದ ಗ್ರಾಮದ ಮಹಿಳೆಯೊಬ್ಬರು ಹರಿಹರ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದರು. ನನ್ನ ಪತಿ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಹುಬ್ಬಳ್ಳಿಯ ಉರ್ದು ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಅಪ್ರಾಪ್ತೆ ಲಾಕ್ ಡೌನ್ ಇದ್ದ ಕಾರಣ ಊರಿಗೆ ಬಂದಿದ್ದಳು.
ಹೋಟೆಲ್ಗೆ ತಿಂಡಿ ತಿನ್ನಲು ಸಾಧಿಕ್ ಅಲಿ ಬರುತ್ತಿದ್ದ. ಈ ವೇಳೆ ಮಗಳನ್ನು ಪರಿಚಯ ಮಾಡಿಕೊಂಡು ಮಾತನಾಡಿಸುತ್ತಿದ್ದ. ಈಗಿರುವಾಗ 2020ರ ಜೂನ್ 26ರಂದು ಮಗಳು ಮನೆಯಲ್ಲಿ ಇರಲಿಲ್ಲ. ಆದ್ದರಿಂದ ಎಲ್ಲ ಕಡೆ ಹುಡುಕಾಟ ನಡೆಸಿದರೂ ಸಿಗಲಿಲ್ಲ. ಅದೇ ತಿಂಗಳು 28ರಂದು ಮಗಳು ರಾತ್ರಿ 8.30ರ ಸುಮಾರಿಗೆ ಮನೆಗೆ ಬಂದಿದ್ದಾಳೆ. ಆಗ ವಿಚಾರಿಸಿದಾಗ 26ರಂದು ಸಂಜೆ 7.30ರ ಸುಮಾರಿಗೆ ಸಾಧಿಕ್ ಅಲಿಯು ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗುತ್ತೇನೆಂದು ಹೇಳಿ ಪುಸಲಾಯಿಸಿ ಬಲವಂತವಾಗಿ ರಾಣೇಬೆನ್ನೂರಿಗೆ ಕರೆದುಕೊಂಡು ಹೋಗಿದ್ದ. ರಾತ್ರಿ ರಾಣೇಬೆನ್ನೂರು ಬಸ್ ನಿಲ್ದಾಣದಲ್ಲಿ ಉಳಿಸಿಕೊಂಡು,
ಮರು ದಿನ ಸಂಜೆ ರಾಣೆಬೆನ್ನೂರು ತಾಲ್ಲೂಕು ನಲವಾಗಿಲು ಗ್ರಾಮದ ಅವರ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮನೆಯಲ್ಲಿ ಉಳಿಸಿಕೊಂಡು 27ರ ರಾತ್ರಿ ಸಮಯದಲ್ಲಿ ನಾನು ಬೇಡವೆಂದರೂ ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದ. 28ರಂದು ರಾತ್ರಿ 8 ಗಂಟೆಗೆ ಗುತ್ತೂರು ಸರ್ಕಲ್ ನಲ್ಲಿ ಬಿಟ್ಟು ಹೋಗಿದ್ದ ಎಂದು ಬಾಲಕಿ ಹೇಳಿದ್ದಳು. ಅಪ್ರಾಪ್ತ ವಯಸ್ಕಳಾದ ನನ್ನ ಮಗಳನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ ಬಲವಂತವಾಗಿ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ನಡೆಸಿರುವ ಸಾದಿಕ್ ಅಲಿ ವಿರುದ್ದ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯಾ ದೊರೆಕಿಸಿಕೊಡಬೇಕೆಂದು ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಹರಿಹರ ವೃತ್ತ ನಿರೀಕ್ಷಕ ಎಂ. ಶಿವಪ್ರಸಾದ್ ಅವರು, ದೋಷಾರೋಪಣಾ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ -1 ದಾವಣಗೆರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಪಾದ ಎನ್. ಅವರು, ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 17 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು. ಸಂತ್ರಸ್ಥೆಗೆ 5 ಲಕ್ಷ ರೂಪಾಯಿಯನ್ನು ಸರ್ಕಾರಿದಿಂದ ಪರಿಹಾರ ನೀಡಲು ಆದೇಶ ಹೊರಡಿಸಿದರು. ಸಂತ್ರಸ್ತೆಯ ಪರವಾಗಿ ಸರ್ಕಾರಿ ವಕೀಲರಾದ ಸುನಂದ ಮಡಿವಾಳ ಅವರು ವಾದ ಮಂಡಿಸಿದ್ದರು.