ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ಇದಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಈ ಸಿನಿಮೋತ್ಸವದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಹಲವರು ತಕರಾರು ತೆಗೆದಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಸಿನಿಮಾಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿದೆ. 9 ಸಿನಿಮಾ ನಿರ್ಮಾಣ ಸಂಸ್ಥೆಗಳಿಂದ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ ಆಗಿದೆ. ತಮ್ಮ ಸಿನಿಮಾಗಳನ್ನು ಫಿಲ್ಮ್ ಫೆಸ್ಟಿವಲ್ಗೆ ಪರಿಗಣಿಸಿಲ್ಲ. ಸಿನಿಮಾಗಳನ್ನು ವೀಕ್ಷಿಸದೇ ಆಯ್ಕೆ ಅಂತಿಮಗೊಳಿಸಲಾಗಿದೆ ಎಂದು ನಿರ್ಮಾಣ ಸಂಸ್ಥೆಗಳು ಆರೋಪ ಮಾಡಿವೆ.
ಮಾರ್ಚ್ 1ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಆರಂಭ ಆಗಲಿದೆ. ಆದರೆ ಆಯ್ಕೆ ಪ್ರಕ್ರಿಯೆ ಸರಿಯಾಗಿ ಆಗಿಲ್ಲ ಎಂಬ ಕಾರಣದಿಂದ ಫಿಲ್ಮ್ ಫೆಸ್ಟಿವಲ್ ಮುಂದೂಡಬೇಕು ಎಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದಾರೆ. ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಈ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಫೆಬ್ರವರಿ 24ರಂದು ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸ್ಪರ್ಧಾತ್ಮಕ ವಿಭಾಗಕ್ಕೆ ಸಲ್ಲಿಕೆಯಾಗಿರುವ ಸಿನಿಮಾಗಳನ್ನು ಪೂರ್ಣವಾಗಿ ವೀಕ್ಷಿಸದೇ ತಿರಸ್ಕರಿಸಿರುವುದು ಗಂಭೀರ ಲೋಪ. ಚಿತ್ರೋತ್ಸವಕ್ಕೆ, ಸರ್ಕಾರ ಸಾರ್ವಜನಿಕರ ಹಣ ನೀಡುವುದು ಅಕಾಡೆಮಿ ಮತ್ತು ಚಿತ್ರೋತ್ಸವ ಸಮಿತಿ ತಮ್ಮ ಮನಸೋ ಇಚ್ಛೆಯಂತೆ ವರ್ತಿಸಿ, ನಿಯಮಗಳನ್ನು ಗಾಳಿಗೆ ತೂರಿ ನಡೆಸುವುದಕ್ಕಲ್ಲ. ಈ ಆರೋಪಕ್ಕೆ ಅಕಾಡೆಮಿ ಮತ್ತು ಚಿತ್ರೋತ್ಸವ ಸಮಿತಿ ವಿವರಣೆ ನೀಡಲೇಬೇಕು’ ಎಂದು ಖ್ಯಾತ ನಿರ್ದೇಶಕ ಮಂಸೋರೆ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.