ಹಿಂದಿ ಟಿವಿ ತಾರೆ ಮೀರಾ ದೋಸ್ತಲೆ ಕಿರುತೆರೆ ನಿರ್ಮಾಪಕರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೀರಾ 2019ರಲ್ಲಿ ಕೆಲಸ ಮಾಡಿದ್ದ ‘ವಿದ್ಯಾ’ ಧಾರಾವಾಹಿಯ ನಿರ್ಮಾಪಕ ಮಹೇಶ್ ಪಾಂಡೆ ವಿರುದ್ಧ ದೂರು ದಾಖಲಿಸಿದ್ದಾರೆ.
ವಿದ್ಯಾ ಧಾರವಾಹಿಯಲ್ಲಿ ಕೆಲಸ ಮಾಡಿಸಿಕೊಂಡು ಸಂಭಾವನೆಯನ್ನು ಪೂರ್ತಿ ನೀಡಿಲ್ಲ. ಪೂರ್ಣ ಪ್ರಮಾಣದ ಹಣ ವಂಚನೆ ಮಾಡಿದ್ದಾರೆಂದು ನಟಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಮೀರಾ ಈ ಹಿಂದೆ ‘ವಿದ್ಯಾ’ ಹೆಸರಿನ ಧಾರಾವಾಹಿಯಲ್ಲಿ ನಟಿಸಿದ್ದರು. ಅವರ ಸಂಭಾವನೆ 8 ಲಕ್ಷ ರೂಪಾಯಿಗಳಾಗಿತ್ತು. ಆದರೆ ನಾಲ್ಕು ಲಕ್ಷ ಮಾತ್ರವೇ ನೀಡಿದ್ದ ನಿರ್ಮಾಪಕ ಮಹೇಶ್ ಪಾಂಡೆ ಬಾಕಿ ಹಣ ನೀಡಿರಲಿಲ್ಲ. ಬಾಕಿ ಹಣ ಕೇಳಿದಾಗ ಸಬೂಬುಗಳನ್ನು ಹೇಳಿದ್ದರು. ತಮ್ಮ ಕರೆಗಳನ್ನು ಸ್ವೀಕರಿಸುವುದನ್ನು ಬಿಟ್ಟಿದ್ದರು. ಹಾಗಾಗಿ ತಾವು ಪೊಲೀಸ್ ಠಾಣೆ ಮೆಟ್ಟಿಲೇರಿರುವುದಾಗಿ ನಟಿ ತಿಳಿಸಿದ್ದಾರೆ.
‘ನಾಲ್ಕು ಲಕ್ಷ ರೂಪಾಯಿ ಮೊತ್ತ ಕೆಲವರಿಗೆ ಚಿಕ್ಕದು ಎನಿಸಬಹುದು ಆದರೆ ನನ್ನ ಕುಟುಂಬವನ್ನು ನಾನೊಬ್ಬಳೆ ಪೋಷಿಸುತ್ತಿದ್ದು, ನಾಲ್ಕು ಲಕ್ಷ ನನಗೆ ದೊಡ್ಡ ಮೊತ್ತ. ಅಲ್ಲದೆ ನಾನು ಕಷ್ಟಪಟ್ಟು ದುಡಿದ ಹಣವನ್ನು ನಾನು ಕೇಳುವುದರಲ್ಲಿ ತಪ್ಪೇನು? ಹಾಗಾಗಿ ನಿರ್ಮಾಪಕನ ವಿರುದ್ಧ ದೂರು ನೀಡಿದ್ದೇನೆ’ ಎಂದಿದ್ದಾರೆ.
ನಟಿಯ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಮಹೇಶ್ ಪಾಂಡೆ, ‘ವಿದ್ಯಾ’ ಧಾರಾವಾಹಿಯಿಂದಾಗಿ ನನಗೆ ನಾಲ್ಕು ಕೋಟಿ ರೂಪಾಯಿ ನಷ್ಟವಾಗಿದೆ. ನಟಿ ಮೀರಾಗೆ ನಾನು ಜಿಎಸ್ಟಿ ಸೇರಿಸಿ 83 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿದ್ದೇನೆ. ಆ ಬಗ್ಗೆ ನಟಿ ಏಕೆ ಮಾತನಾಡುತ್ತಿಲ್ಲ, ನಾನು ಬಾಕಿ ಕೊಡಬೇಕಾಗಿರುವುದು ಮೂರು ಲಕ್ಷ ರೂಪಾಯಿಗಳು ಮಾತ್ರ. ನನಗೆ ನಷ್ಟವಾದ ಕಾರಣ ನಾನು ಹಣ ಪಾವತಿ ಮಾಡಲು ಆಗಲಿಲ್ಲ. ‘ವಿದ್ಯಾ’ ಶೋ ಮುಗಿದಿಲ್ಲ ಬದಲಿಗೆ ಅರ್ಧಕ್ಕೆ ನಿಲ್ಲಿಸಲಾಯ್ತು. ಅದರ ಬಗ್ಗೆ ನಟಿ ಮಾತನಾಡಲಿ’ ಎಂದಿದ್ದಾರೆ.
‘ಆಕೆಗೆ ಮೋಸ ಮಾಡುವ ಉದ್ದೇಶ ಹೊಂದಿದ್ದಿದ್ದರೆ ಬರೀ 3 ಲಕ್ಷ ಹಣ ನೀಡಿ ಸುಮ್ಮನಾಗಿರುತ್ತಿದ್ದೆ. ನಾನು ದೊಡ್ಡ ಮೊತ್ತವನ್ನೇ ನಟಿಗೆ ನೀಡಿದ್ದೇನೆ. ಈಗಲೂ ಸಹ ಬಾಕಿ ಹಣವನ್ನು ನೀಡುವ ಉದ್ದೇಶದಲ್ಲಿಯೇ ಇದ್ದೇನೆ. ಆಕೆಯ ಬಾಕಿ ಮೊತ್ತವನ್ನೆಲ್ಲ ಲೆಕ್ಕ ಹಾಕಿದ ಬಳಿಕ ಬಾಕಿ ಹಣ ಪಾವತಿಸುತ್ತೇನೆ’ ಎಂದಿದ್ದಾರೆ.