ನವದೆಹಲಿ: 2023ರ ಮೇ ತಿಂಗಳಿನಿಂದ 2000 ರೂ.ಗಳ ನೋಟುಗಳನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡ ಬಳಿಕ ಶೇಕಡಾ 98.08 ರಷ್ಟು ನೋಟುಗಳು ಮರಳಿವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಮೇ 19, 2023ರಂದು 2000 ರೂ.ಗಳ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದಾಗ ವ್ಯವಹಾರದ ಕೊನೆಯಲ್ಲಿ 3.56 ಲಕ್ಷ ಕೋಟಿ ರೂಪಾಯಿಗಳು ಚಲಾವಣೆಯಲ್ಲಿದ್ದವು. ಅಂದಿನಿಂದ 2 ಸಾವಿರ ರೂ. ನೋಟುಗಳ ಚಲಾವಣೆ ಗಮನಾರ್ಹವಾಗಿ ಕಡಿಮೆಯಾಗಿದ್ದು 2024 ರ ಅಂತ್ಯದ ವೇಳೆಗೆ ಕೇವಲ 6,691 ಕೋಟಿ ರೂ. ಚಲಾವಣೆಯಲ್ಲಿದೆ ಎಂದು ಆರ್ಬಿಐ ಹೇಳಿದೆ.
Chanakya Niti: ನಿಮಗಿರುವ ಕಷ್ಟಗಳನ್ನು ಎದುರಿಸಲು ಚಾಣಕ್ಯ ಹೇಳಿದ ಈ 10 ವಿಷಯಗಳನ್ನು ನೆನಪಿಡಿ ಸಾಕು.!
2016ರ ನವೆಂಬರ್ 8 ರಂದು 500 ಹಾಗೂ 1,000 ಮುಖಬೆಲೆಯ ನೋಟು ಅಮಾನ್ಯೀಕರಣದ ನಂತರ ಹೊಸದಾಗಿ 2,000 ರೂ. ನೋಟುಗಳನ್ನು ಪರಿಚಯಿಸಲಾಗಿತ್ತು. ಆದರೆ 2018ರಲ್ಲಿಯೇ 2,000 ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತಾಗಿ ಸದನಕ್ಕೆ ಕೇಂದ್ರ ಸರ್ಕಾರ \ ಮಾಹಿತಿ ನೀಡಿತ್ತು. ಹೊಸ 2,000 ರೂ. ನೋಟುಗಳನ್ನು ನೇರವಾಗಿ ನಿಷೇಧ ಮಾಡದೇ ಇದ್ದರೂ ಆರ್ಬಿಐ ಹಂತ ಹಂತವಾಗಿ ಮುದ್ರಣವನ್ನು ಕಡಿಮೆ ಮಾಡುತ್ತಾ ಬಂದಿತ್ತು. ಅಂತಿಮವಾಗಿ ಮೇ 19, 2023 ರಂದು 2,000 ರೂ. ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು.
ಕ್ಲೀನ್ ನೋಟ್ ಅಭಿಯಾನದಡಿ ಅಕ್ಟೋಬರ್ 7, 2023 ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು ಅನುಮತಿ ಇತ್ತು. ಈ ಗಡುವು ಮುಗಿದ ಬಳಿಕ ತನ್ನ 19 ವಿತರಣಾ ಕಚೇರಿಗಳಲ್ಲಿ ಈ ಸೇವೆ ಒದಗಿಸುವುದನ್ನು ಆರ್ಬಿಐ ಈಗಲೂ ಮುಂದುವರೆಸಿದೆ.
2,000 ರೂ. ನೋಟುಗಳು ಚಲಾವಣೆ ಇಲ್ಲದೇ ಇದ್ದರೂ ಈಗಲೂ ಕಾನೂನು ಮಾನ್ಯತೆಯನ್ನು ಹೊಂದಿದೆ. ಜನರು ಲಭ್ಯವಿರುವ ವ್ಯವಸ್ಥೆಯ ಮೂಲಕ ಮೂಲಕ ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ಠೇವಣಿ ಮಾಡಬಹುದು. ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮೆ ಮಾಡಲು ದೇಶದ ಯಾವುದೇ ಅಂಚೆ ಕಚೇರಿಯಿಂದ ಭಾರತೀಯ ಅಂಚೆ ಮೂಲಕ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ಗೆ ಕಳುಹಿಸಬಹುದು.
ಸದ್ಯ ಎಲ್ಲಿ 2000 ರೂ. ನೋಟುಗಳನ್ನು ಸ್ವೀಕರಿಸಲಾಗುತ್ತದೆ?
ಆರ್ಬಿಐಯ ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ತಿರುವನಂತಪುರಂ ಕಚೇರಿ ತೆರಳಿ ವಿನಿಮಯ ಅಥವಾ ಠೇವಣಿ ಇಡಬಹುದು.