ದಾವಣಗೆರೆ: ಸರ್ವಧರ್ಮ ಸಮನ್ವಯತೆಯಿಂದ ಸರ್ವಧರ್ಮಿಯರು ಬಾಳುವಂತೆ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ದಾವಣಗೆರೆ ತಾಲ್ಲೂಕಿನ ಗೊಲ್ಲರಹಳ್ಳಿಯಲ್ಲಿ ನಡೆದ ಕುಕ್ಕುವಾಡೇಶ್ವರಿ ದೇವಸ್ಥಾನ ಸಮಿತಿ, ವಾಲ್ಮೀಕಿ ನಾಯಕ ಯುವಕರ ಸಂಘ, ಗೊಲ್ಲರಹಳ್ಳಿಯ ಎಲ್ಲಾ ನೌಕರರು ಹಾಗೂ ಸಮಸ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ಉದ್ಘಾಟನಾ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸ್ವಾಮೀಜಿ ಕಿವಿಮಾತು ಹೇಳಿದರು. ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.
ದೇವರು ನಿರಾಕಾರವಾಗಿದ್ದು, ಗಾಳಿಯಂತೆ ಕಣ್ಣಿಗೆ ಕಾಣುವುದಿಲ್ಲ. ದೇವರು ಬೇರೆ ರೂಪದಲ್ಲಿ ಕಂಡಾಗ ಅದಕ್ಕೆ ಜಾತಿ, ಧರ್ಮದ ಲೇಪನ ಮಾಡಬಾರದು. ಆಸ್ತಿ, ಮನೆಗಾಗಿ ಹೊಡೆದಾಟಕ್ಕಿಂತ ಮನುಷ್ಯ ಮನುಷ್ಯನ ಮೇಲೆ ಇವತ್ತು ಕ್ರೌರ್ಯ ಎಸೆಗುತ್ತಿರುವುದು ದೇವರು ಮತ್ತು ಧರ್ಮದ ಹೆಸರಿನಲ್ಲಿ ಎಂದು ವಿಷಾಧಿಸಿದರು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಒಂದು ಊರು ಎಂದರೆ ಜಾತಿ, ಮತವೆಂಬ ಬೇಧ ಬಿಟ್ಟು ಬೆಳೆಯಬೇಕು. ಇಂತಹದ್ದನ್ನು ಒಗ್ಗಟ್ಟಾಗಿ ಅಣಜಿ, ಗೊಲ್ಲರಹಳ್ಳಿ ಗ್ರಾಮಸ್ಥರು ಮಾಡಿದ್ದಾರೆ. ಇದಕ್ಕೆ ಕುಕ್ಕವಾಡೇಶ್ವರಿ ಮೂರ್ತಿಯಾಗಿ ಪ್ರತಿಷ್ಠಾಪಿತವಾಗಲು ಕಾರಣ ಎಂದರು.
ಉದ್ಯಮಿ ಜಿ.ಎಸ್. ಶ್ಯಾಮ್ ಮಾತನಾಡಿ, ಪ್ರಸ್ತುತ ಕಾಲ ಘಟ್ಟದಲ್ಲಿ ನಮ್ಮ ಸಂಸ್ಕøತಿ ಕಾಪಾಡಿಕೊಳ್ಳಲು ವಿದ್ಯಾವಂತ, ಬುದ್ಧಿವಂತ, ಸಂಸೃತಿವಂತರ ನ್ನಾಗಿಸಬೇಕು ಎಂದರು. ಗೋ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಬಿ.ಟಿ. ಸಿದ್ದಪ್ಪ ಮಾತನಾಡಿ, ಊರಿನಲ್ಲಿ ಧರ್ಮ ನಿಷ್ಠರು ಇದ್ದರೆ ಮಳೆ, ಬೆಳೆ ಉತ್ತಮವಾಗಲಿದೆ. ಧರ್ಮ, ದಾನ, ನೀತಿ, ಒಗ್ಗಟ್ಟು ಇದ್ದರೆ ದುಡಿಮ್ಯಸ್ಥರಾಗಲಿದ್ದು, ಒಳ್ಳೇತನ ಬರಲಿದೆ ಎಂದರು. ಕಾರ್ಯಕ್ರಮದಲ್ಲಿ ದಾವಣಗೆರೆ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ವಾಲ್ಮೀಕಿ ನಾಯಕ ಯುವ ಘಟಕದ ಅಧ್ಯಕ್ಷ ಡಿ.ಜೆ. ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಪ್ರವೀಣ್ ಶಾಮನೂರು, ಎಸ್.ಕೆ. ಮಲ್ಲಿಕಾರ್ಜುನ್, ಗುಮ್ಮನೂರು ಶ್ರೀನಿವಾಸ್, ಬಸವಲಿಂಗಪ್ಪ ಗ್ರಾಮದ ಮುಖಂಡರು ಭಾಗವಹಿಸಿದ್ದರು.