ಬಾಂಗ್ಲಾದೇಶವು ಮೂಲಭೂತ ಮಾನವ ಹಕ್ಕುಗಳ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಬಂಧಿತರಿಗೆ ಸೂಕ್ತ ಕಾನೂನು ಸಹಾಯ ಸಿಗುವಂತೆ ನೋಡಿಕೊಳ್ಳುಬೇಕು. ಮೂಲಭೂತ ಮಾನವ ಹಕ್ಕುಗಳ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಬಂಧಿತರಿಗೆ ಸೂಕ್ತವಾದ ಕಾನೂನು ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಾಷಿಂಗ್ಟನ್ನಲ್ಲಿರುವ ಯುಎಸ್ ರಾಜ್ಯ ಇಲಾಖೆಯ ವಕ್ತಾರರು ಹೇಳಿದ್ದಾರೆ.
ವಕೀಲರು ಬಾರದ ಕಾರಣ ಚಿತ್ತಗಾಂಗ್ ನ್ಯಾಯಾಲಯದಲ್ಲಿ ಬಂಧಿತ ಚಿನ್ಮಯ್ ಕೃಷ್ಣ ದಾಸ್ ಜಾಮೀನು ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಲಾಯಿತು. ಅಷ್ಟೇ ಅಲ್ಲದೆ ಅಲ್ಲಿನ ಅಧಿಕಾರಿಗಳು ವಕೀಲರನ್ನು ಕೋರ್ಟ್ನ ಆವರಣಕ್ಕೆ ಬರದಂತೆ ತಡೆದಿದ್ದರು.
ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳ ವರದಿಗಳನ್ನು ಬಾಂಗ್ಲಾ ಪ್ರಧಾನಿ ಯೂನಸ್ ತಳ್ಳಿಹಾಕಿದ್ದರು. ಗುರುವಾರ ಧಾರ್ಮಿಕ ಮುಖಂಡರ ಜತೆ ಮತ್ತೊಂದು ಸಭೆ ನಡೆಸಲಿದ್ದಾರೆ. ರವೀಂದ್ರ ಘೋಷ್ ಎಂದು ಗುರುತಿಸಲಾದ ವಕೀಲರೊಬ್ಬರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಢಾಕಾದಿಂದ ಸುಮಾರು 250 ಕಿಮೀ ಪ್ರಯಾಣಿಸಿದ್ದರು. ಆದರೆ, ಸ್ಥಳೀಯರು ನ್ಯಾಯಾಲಯದ ಆವರಣಕ್ಕೆ ಪ್ರವೇಶ ನಿರಾಕರಿಸಿದರು ಎಂದು ಅವರು ಹೇಳಿದರು.
ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣದಾಸ್ ಬಂಧನದ ವಿಚಾರ ವಿವಾದಕ್ಕೀಡಾಗಿರುವಂತೆಯೇ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂಗಳನ್ನು ಗುರಿಯಾಗಿಸಿ ಯಾವುದೇ ವ್ಯವಸ್ಥಿತ ದಾಳಿ ನಡೆಸಲಾಗಿಲ್ಲ. ನಿರ್ದಿಷ್ಟ ಆರೋಪದ ಆಧಾರದಲ್ಲಿಯೇ ಹಿಂದೂ ನಾಯಕರನ್ನು ಬಂಧಿಸಲಾಗಿದೆ.
ನಮ್ಮ ದೇಶದ ಕಾನೂನಿನ ಅನ್ವಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಬಾಂಗ್ಲಾದೇಶ ಸರ್ಕಾರವು ವಿಶ್ವಸಂಸ್ಥೆಗೆ ತಿಳಿಸಿದೆ. ಜಿನಿವಾದಲ್ಲಿ ನಡೆದ ಅಲ್ಪಸಂಖ್ಯಾಕರ ಸಮಸ್ಯೆಗಳ ಶೃಂಗಸಭೆಯ 17ನೇ ಅಧಿವೇಶನದಲ್ಲಿ ವಿಶ್ವಸಂಸ್ಥೆಗೆ ಬಾಂಗ್ಲಾದ ಖಾಯಂ ಪ್ರತಿನಿಧಿ ಆಗಿರುವ ತಾರೀಖ್ ಮೊಹಮ್ಮದ್ ಆರಿಫುಲ್ ಇಸ್ಲಾಮ್ ಈ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ತಾರತಮ್ಯವನ್ನು ಪರಿಹರಿಸುವಂತೆ 68 ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಹಾಲಿ ಸಂಸದರ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. ಇಸ್ಕಾನ್ನ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನಕ್ಕೆ ಸಂಬಂಧಿಸಿದಂತೆ ಅವರು ಮಧ್ಯಸ್ಥಿಕೆವಹಿಸಬೇಕೆಂದು ಮನವಿ ಮಾಡಿದ್ದಾರೆ.