ಬೆಂಗಳೂರು:- ಚಾಲೆಂಜಿಂಗ್ ಸ್ಟಾರ್ ನಟ. ಸಾಕಷ್ಟು ಮಾಸ್ ಫ್ಯಾನ್ ಗಳನ್ನು ಹೊಂದಿರೋ ನಟ. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಅದೊಂದು ಘಟನೆ ಅವರ ಸಿನಿ ಬದುಕಿಗೆ ಮುಳುವಾಗಿ ಬಿಟ್ಟಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿದರ್ಶನ್ ಪಾಲಿಗೆ ಬೇಲ್ ಅನ್ನೋದು ಸದ್ಯದ ಮಟ್ಟಿಗೆ ದೂರದ ಬೆಟ್ಟವಾಗಿದೆ. ಅ.14ರಂದು ಬೇಲ್ ಸಿಕ್ಕೇ ಸಿಗುತ್ತೆ ಎನ್ನುವ ದರ್ಶನ್ ಕನಸು ನುಚ್ಚು ನೂರಾಯ್ತು. ಬೆಂಗಳೂರಿನ 57 ಸಿಸಿಎಚ್ ನ್ಯಾಯಾಲಯ ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇನ್ನು ಈ ನಡುವೆ ನಟ ದರ್ಶನ್ ಬಹಳ ಬೆನ್ನು ನೋವಿನಿಂದಲೂ ಬಳಲುತ್ತಿದ್ದಾರೆ.
ಇನ್ನು ಪರಪ್ಪನ ಅಗ್ರಹಾರದಿಂದ, ಬಳ್ಳಾರಿ ಜೈಲಿಗೆ ಹೋದಾಗಿನಿಂದ ಪತ್ನಿ ವಿಜಯಲಕ್ಷ್ಮಿ ಪತಿ ದರ್ಶನ್ರನ್ನ ನೋಡಲು ಬರುತ್ತಲೇ ಇದ್ದಾರೆ. ಇನ್ನು ಈ ವೇಳೆ ಅವರ ಜೊತೆ ದರ್ಶನ್ ಆಪ್ತರು, ಕುಟುಂಬಸ್ಥರೂ ಕೂಡಾ ಆಗಮಿಸುತ್ತಿರುತ್ತಾರೆ. ಜೈಲಿಗೆ ಹೋದಾಗಿನಿಂದ ದರ್ಶನ್ಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಲೇ ಇದೆ.
ಇನ್ನು ದರ್ಶನ್ ಜೈಲು ಸೇರಿದಾಗಿನಿಂದ ತನ್ನ ಬೆನ್ನು ನೋವಿನ ಬಗ್ಗೆ ಹೇಳುತ್ತಲೇ ಬಂದಿದ್ದಾರೆ. ಈ ಸಮಸ್ಯೆಯಿಂದಾಗಿ ನ್ಯಾಯಾಲಯದಲ್ಲೂ ಹೇಳಿಕೊಂಡಿದ್ದು, ಇದಕ್ಕಾಗಿ ಅವರಿಗೆ ಬೆಡ್, ಸರ್ಜಿಕಲ್ ಚೇರ್ ನೀಡುವಂತೆಯೂ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿಗೆ ನೀಡಿ ನ್ಯಾಯಾಲಯವೂ ಮನವಿಗೆ ಸ್ಪಂದಿಸಿತ್ತು.
ಇನ್ನು ಇತ್ತೀಚೆಗಷ್ಟೇ ವೈದ್ಯರೂ ಕೂಡ ಜೈಲಿಗೆ ಭೇಟಿಕೊಟ್ಟು ದರ್ಶನ್ ಅವರ ಬೆನ್ನುನೋವಿನ ಬಗ್ಗೆ ಟೆಸ್ಟ್ ಮಾಡಿದ್ದಾರೆ. ಆ ಬಳಿಕ ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದರು.
ಮೊನ್ನೆ ತಾನೇ ದರ್ಶನ್ ಭೇಟಿಯಾಗಲು ಜೈಲ್ ಗೆ ಸಂಬಂಧಿ ಮತ್ತು ಆಪ್ತರು ಬಂದಿದ್ದಾರೆ. ದರ್ಶನ್ರನ್ನು ನೋಡಲು ಸಂಬಂಧಿ ಸುಶಾಂತ್ ನಾಯ್ಡು, ಆಪ್ತ ಧನ್ವೀರ್ ಸೇರಿ ನಾಲ್ಕು ಜನ ಆಗಮಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ನೋಡಲು ನಟ ದರ್ಶನ್ ಬ್ಯಾಗ್ ಹಿಡಿದುಕೊಂಡು ಬರುತ್ತಾರೆ. ಆದ್ರೆ ಇಷ್ಟು ದೊಡ್ಡ ಬ್ಯಾಗ್ನಲ್ಲಿ ಏನಿರಬಹುದು ಎಂಬ ಕುತೂಹಲ ಜನರಿಗೆ ಇದೆ. ವರದಿಯ ಪ್ರಕಾರ, ಇದರಲ್ಲಿ ಡ್ರೈಫ್ರೂಟ್ಸ್, ಬಟ್ಟೆಗಳು ಇರಬಹುದು ಎಂದು ಹೇಳಲಾಗುತ್ತಿದೆ.
ಆದ್ರೆ ಸಿನಿಮಾ ಮಾಡುತ್ತಾ ರಾಜನಂತೆ ಇದ್ದ ನಟ ದರ್ಶನ್ ಇದೀಗ ಬ್ಯಾಗ್ ಎತ್ತಲೂ ಪರದಾಡುತ್ತಿದ್ದಾರೆ. ಅತಿಯಾದ ಬೆನ್ನುನೋವಿನಿಂದಾಗಿ ಬ್ಯಾಗ್ ಹಿಡಿದು ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ದರ್ಶನ್ ಇದ್ದಾರೆ.
ದರ್ಶನ್ ತನ್ನ ಸಂಬಂಧಿ ಮತ್ತು ನಟ ಧನ್ವೀರ್ ಭೇಟಿಯಾಗಲು ಬರುವಾಗ ಒಂದಲ್ಲ ಎರಡು ಬಾರಿ ಅಲ್ಲಲ್ಲಿ ಬ್ಯಾಗ್ ಇಟ್ಟುಕೊಂಡು ಬಂದಿದ್ದಾರೆ. ಕಾರಣ ಅತಿಯಾದ ಬೆನ್ನುನೋವು. ಅಲ್ಲಲ್ಲಿ ನಿಂತು ಬೆನ್ನಿಗೆ ಕೈ ಇಡುತ್ತಾ, ಸಹಿಸಲಾಗದ ನೋವಿನೊಂದಿಗೆ ತೆರಳಿದ್ದಾರೆ.