ಒಂದು ಕಾಲದಲಿ ಬಾಲಿವುಡ್ ಚಿತ್ರರಂಗವನ್ನೇ ಆಳಿದ್ದ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಕೆಲ ವರ್ಷಗಳಿಂದ ಸೈಲೆಂಟ್ ಆಗಿದ್ದಾರೆ, ಅಕ್ಕಿ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಅಕ್ಷಯ್ ಸಿನಿಮಾಗೆ ಬಂಡವಾಳ ಹೂಡಲು ನಿರ್ಮಾಪಕರು ಹಿಂದೇಟು ಹಾಕ್ತಿದ್ದಾರೆ. ಇದೇ ವೇಳೆ ಅಕ್ಷಯ್ ಮುಂಬೈನಲ್ಲಿ ತಾವು ಹೊಂದಿದ್ದ ಬಹುಕೋಟಿ ರೂಪಾಯಿ ಬೆಲೆಬಾಳುವ ಅಪಾರ್ಟ್ಮೆಂಟ್ ಮಾರಿದ್ದಾರೆ ಎಂದು ಸುದ್ದಿ ಕೇಳಿಬಂದಿದೆ. ಆದರೆ ಈ ಬಗ್ಗೆ ಅಕ್ಷಯ್ ಕುಮಾರ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಮುಂಬೈನ ವರ್ಲಿಯಲ್ಲಿ ಇರುವ 360 ವೆಸ್ಟ್ ಟವರ್ನಲ್ಲಿ ಅಕ್ಷಯ್ ಕುಮಾರ್ ಅವರು ಅಪಾರ್ಟ್ಮೆಂಟ್ ಹೊಂದಿದ್ದರು. 39ನೇ ಮಹಡಿಯಲ್ಲಿ ಇರುವ ಈ ಅಪಾರ್ಟ್ಮೆಂಟ್ ಈಗ ಮಾರಾಟ ಆಗಿದೆ. ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ ಅವರು ಬರೋಬ್ಬರಿ 80 ಕೋಟಿ ರೂಪಾಯಿಗೆ ಈ ಆಸ್ತಿ ಮಾರಿದ್ದಾರೆ. ಜನವರಿ 31ರಂದು ಈ ವ್ಯವಹಾರ ನಡೆದಿದೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ.
6830 ಚದರ ಅಡಿ ವಿಸ್ತೀರ್ಣ ಇರುವ ಈ ಅಪಾರ್ಟ್ಮೆಂಟ್ಗೆ 4 ಕಾರು ಪಾರ್ಕಿಂಗ್ ಜಾಗ ಕೂಡ ಇದೆ. ವರದಿಗಳ ಪ್ರಕಾರ, ಪಲ್ಲವಿ ಜೈನ್ ಎಂಬುವವರು ಈ ಆಸ್ತಿಯನ್ನು ಖರೀದಿ ಮಾಡಿದ್ದಾರೆ. 4.8 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಕಟ್ಟಲಾಗಿದೆ. ಮುಂಬೈನಲ್ಲಿ ಇದು ತುಂಬ ಕಮರ್ಷಿಯಲ್ ಆದ ಜಾಗ. ಹಾಗಾಗಿ ಅತಿ ದುಬಾರಿ ಬೆಲೆಗೆ ಈ ಅಪಾರ್ಟ್ಮೆಂಟ್ ಮಾರಾಟ ಮಾಡಲಾಗಿದೆ ಎನ್ನಲಾಗುತ್ತಿದೆ.