ಟಾಲಿವುಡ್ ಚಿತ್ರರಂಗದ ಖ್ಯಾತ ಫ್ಯಾಮಿಲಿಗಳಲ್ಲಿ ಒಂದಾದ ಅಕ್ಕಿನೇನಿ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದೆಹಲಿಯ ಸಂಸತ್ ಭವನದಲ್ಲಿ ಈ ಭೇಟಿ ನಡೆದಿದ್ದು ಭೇಟಿಯ ವೇಳೆ ಮೋದಿ ಅವರಿಗೆ ಟಾಲಿವುಡ್ ದಂತಕಥೆ ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್ಆರ್) ಅವರ ಕುರಿತಾದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಟ ನಾಗಾರ್ಜುನ ಅಕ್ಕಿನೇನಿ ಮೋದಿಯವರಿಗೆ ತಮ್ಮ ತಂದೆಯ ಕುರಿತು ಬರೆಯಲಾದ ‘ಮಹಾನ್ ಅಭಿನೇತ ಅಕ್ಕಿನೇನಿ ಕಾ ವಿರಾಟ್ ವ್ಯಕ್ತಿತ್ವ’ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಈ ಪುಸ್ತಕವನ್ನು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮತ್ತು ಮಾಜಿ ಸಂಸತ್ ಸದಸ್ಯ ಪ್ರೊಫೆಸರ್ ಯರ್ಲಗಡ್ಡ ಲಕ್ಷ್ಮಿ ಪ್ರಸಾದ್ ಬರೆದಿದ್ದಾರೆ.
ಅಕ್ಕಿನೇನಿ ನಾಗೇಶ್ವರ್ ರಾವ್ ಅವರ 100ನೇ ಜನ್ಮದಿನೋತ್ಸವದ ಪ್ರಯುಕ್ತ ಈ ಪುಸ್ತಕ ಬರೆಯಲಾಗಿದೆ. ಈ ಪುಸ್ತಕವು ನಾಗೇಶ್ವರ್ ರಾವ್ ಅವರ ಸಿನಿಮಾ ಪ್ರಯಾಣವನ್ನು ಒಳಗೊಂಡಿದೆ. ಇದು ಅವರ ಸಿನಿಮಾಗಳ ಶ್ರೇಷ್ಠತೆ, ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಪುಸ್ತಕದಲ್ಲಿ ಬರೆಯಲಾಗಿದೆ.
ಮನ್ ಕಿ ಬಾತ್ನ 117ನೇ ಸಂಚಿಕೆಯಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ಮತ್ತು ಇತರ ಸಿನಿಮಾ ದಿಗ್ಗಜರಾದ ತಪನ್ ಸಿನ್ಹಾ, ರಾಜ್ ಕಪೂರ್ ಮತ್ತು ಮೊಹಮ್ಮದ್ ರಫಿ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ವೇಳೆ ರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ತಂದೆಯ ಪರಂಪರೆಯನ್ನು ಗುರುತಿಸಿದ್ದಕ್ಕಾಗಿ ನಾಗಾರ್ಜುನ ಅಕ್ಕಿನೇನಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.