ಕೆಜಿಎಫ್ ಸಿನಿಮಾದ ಬಳಿಕ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಆರಂಭವಾಗಿದೆ. ಟಾಕ್ಸಿಕ್ ಸಿನಿಮಾದ ಕುರಿತು ದಿನಕ್ಕೊಂದು ಹೊಸ ಹೊಸ ಸುದ್ದಿಗಳು ಹರಿದಾಡುತ್ತಿದೆ. ಇದೀಗ ಚಿತ್ರತಂಡಕ್ಕೆ ಮಾಜಿ ವಿಶ್ವಸುಂದರಿ ನಟಿ ಐಶ್ವರ್ಯಾ ರೈ ಎಂಟ್ರಿಕೊಡಲಿದ್ದಾರೆ ಎಂಬ ಸುದ್ದಿ ಕೇಳಿ ಬರ್ತಿದೆ.
ಕೆಜಿಎಫ್ ಸಿನಿಮಾ ರಿಲೀಸ್ ಆದ ಸಾಕಷ್ಟು ಸಮಯದ ಬಳಿಕ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾಗಾಗಿ ಬೆಂಗಳೂರಿನಲ್ಲಿ ಈಗಾಗಲೇ ಬೃಹತ್ ಸೆಟ್ ಹಾಕಿದ್ದು, ಇನ್ನೇನು ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.
ಇತ್ತೀಚೆಗೆ ಯಶ್ ಸಿನಿಮಾದಲ್ಲಿ ಕರೀನಾ ಕಪೂರ್ ನಟಿಸುವ ಸುದ್ದಿ ಭಾರೀ ಚರ್ಚೆಯಾಗಿತ್ತು. ಯಶ್ ಸಹೋದರಿ ಪಾತ್ರಕ್ಕೆ ಅವರನ್ನು ಸಂಪರ್ಕಿಸಿದೆ ಎನ್ನಲಾಗಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ ಕರೀನಾ ಹೊರನಡೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ನಯನತಾರಾ ಹೆಸರು ಚಾಲ್ತಿಗೆ ಬಂತು. ಇದರ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಮೊದಲೇ ಐಶ್ವರ್ಯಾ ರೈ ಹೆಸರು ಚರ್ಚೆಗೆ ಗ್ರಾಸವಾಗಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಸಹೋದರಿ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಹಾಗಾಗಿ ನಟನೆಯಲ್ಲಿ ಪಳಗಿರುವ ನಟಿಯರನ್ನೇ ಚಿತ್ರತಂಡ ಮಣೆ ಹಾಕ್ತಿದೆ. ಸದ್ಯ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಅವರನ್ನು ಸಹೋದರಿ ಪಾತ್ರಕ್ಕೆ ಚಿತ್ರತಂಡ ಸಂಪರ್ಕಿಸಿದೆ. ನಯನತಾರಾ ಅಥವಾ ಐಶ್ವರ್ಯಾ ರೈ ಇಬ್ಬರಲ್ಲಿ ಒಬ್ಬರನ್ನು ಫೈನಲ್ ಮಾಡಲಿದೆ ಚಿತ್ರತಂಡ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬರುವವರೆಗೂ ಕಾಯಬೇಕಿದೆ.