ಇತ್ತೀಚೆಗೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ಹಿರಿಯ ಪುತ್ರ ಆರ್ಯನ್ ಖಾನ್ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮೊಮ್ಮಗಳು ಆರಾಧ್ಯಾ ಬಚ್ಚನ್ ಅವರ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಆರ್ಯನ್ ಮತ್ತು ಆರಾಧ್ಯಾ ಮದುವೆಯಾಗುವುದನ್ನು ತೋರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದ್ದು, ಫೋಟೋ ನೋಡಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರಾಧ್ಯಾ ಮತ್ತು ಆರ್ಯನ್ ಅವರ ಫೋಟೋಗಳನ್ನು ಬಳಕೆದಾರರು ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಆರಾಧ್ಯಾ ವಧುವಾಗಿ ಕಾಣಿಸಿಕೊಂಡರೆ, ಆರ್ಯನ್ ವರನಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ವೈರಲ್ ಫೋಟೋಗಳನ್ನು ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಆರಾಧ್ಯಾ ಮತ್ತು ಬಿಗ್ ಬಿ ಕಾಣಿಸಿಕೊಂಡರೆ, ಇನ್ನೊಂದರಲ್ಲಿ ಆರ್ಯನ್ ಮತ್ತು ಆರಾಧ್ಯಾ ಕಾಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋಗೆ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ‘ಫೋಟೋ ಎಡಿಟ್ ಮಾಡಿದವರ ವಿರುದ್ಧ ಕೇಸು ದಾಖಲಿಸಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಇದು ಅತ್ಯಂತ ನಾಚಿಕೆಗೇಡಿನ ಕೃತ್ಯ’ ಎಂದು ಇನ್ನೂ ಕೆಲವರು ಕಮೆಂಟ್ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ, ನಟ ಅಭಿಷೇಕ್ ಬಚ್ಚನ್ ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಿದ್ದರು. ಆರಾಧ್ಯಾ ಅವರ ಆರೋಗ್ಯದ ಬಗ್ಗೆ ವದಂತಿಗಳನ್ನು ಹರಡಿದ್ದಕ್ಕಾಗಿ ಅಭಿಷೇಕ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಮತ್ತೆ ಅರಾಧ್ಯ ಫೋಟೋಗಳನ್ನು ವೈರಲ್ ಮಾಡಲಾಗಿದೆ.