ಬಳ್ಳಾರಿ:- ಗ್ಯಾರಂಟಿ ಯೋಜನೆ ಅನುಕೂಲ ನೋಡಿ ಬಿಜೆಪಿ ತತ್ತರಿಸಿ ಹೋಗಿದೆ ಎಂದು ಹೆಚ್ ಕೆ ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ನೋಡಿ ಬಿಜೆಪಿ ತತ್ತರಿಸಿ ಹೋಗಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದನ್ನು ಉಲ್ಲೇಖಿಸಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವುದಕ್ಕೆ ಇಷ್ಟು ದಿನ ಬೇಕಾಯಿತು. ಇದರಿಂದ ನಮ್ಮ ಪಕ್ಷಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಪಕ್ಷದ ಸಂಘಟನೆ ಗಟ್ಟಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೆಚ್ ಕೆ ಪಾಟೀಲ್ ಭರವಸೆ ವ್ಯಕ್ತಪಡಿಸಿದರು.
ಮುಂದುವರೆದು ಬರ ಪರಿಶೀಲನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರದ ಬರ ಅಧ್ಯಯನ ತಂಡ ಬಂದು ಪರಿಶೀಲನೆ ನಡೆಸಿ ಹೋಗಿದೆ. ಸರ್ಕಾರದ ಜೊತೆ ಚರ್ಚೆ ಮಾಡಿದೆ. ಬರ ಪರಿಹಾರವಾಗಿ ಕೇಂದ್ರ ಸರ್ಕಾರ 3,700 ಕೋಟಿ ರೂಪಾಯಿ ರಿಲೀಸ್ ಮಾಡಬೇಕಿತ್ತು. ಆದರೆ, ಇದುವರೆಗೂ ನಯಾ ಪೈಸೆ ಕೊಟ್ಟಿಲ್ಲ. ಬರ ಪರಿಹಾರಕ್ಕೆ ಒತ್ತಾಯ ಮಾಡಬೇಕಾದ ಬಿಜೆಪಿ ನಾಯಕರು ಬರ ಅಧ್ಯಯನ ಮಾಡ್ತಿದ್ದಾರೆ. ಮುಂಗಾರು ಮುಗಿದು ಹಿಂಗಾರು ಸಮಯದಲ್ಲಿ ಬರ ಅಧ್ಯಯನ ಮಾಡಲು ಹೊರಟಿದ್ದಾರೆ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಸಂಸದರು ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ ಎಂದು ಪಾಟೀಲ್ ಆರೋಪಿಸಿದರು.