ಪಾಕಿಸ್ತಾನವು ಅಫ್ಗಾನಿಸ್ತಾನದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಆಡಳಿತ ತಿಳಿಸಿದೆ.
ಅಫ್ಗಾನಿಸ್ತಾನದ ಪಕ್ತಿಕ ಮತ್ತು ಖೋಸ್ಟ್ ಪ್ರಾಂತ್ಯ ಮತ್ತು ಪಾಕಿಸ್ತಾನದ ಗಡಿಭಾಗದಲ್ಲಿ ವೈಮಾನಿಕ ದಾಳಿ ನಡೆದಿರುವ ಬಗ್ಗೆ ಅಫ್ಗಾನಿಸ್ತಾನ ಸರ್ಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇಂದು ‘ಮುಂಜಾನೆ 3 ಗಂಟೆಯ ವೇಳೆಗೆ ಪಾಕಿಸ್ತಾನದ ಯುದ್ಧವಿಮಾನಗಳು ನಾಗರಿಕರ ಮನೆಗಳ ಮೇಲೆ ದಾಳಿ ನಡೆಸಿವೆ ಎಂದು ಅಫ್ಗಾನ್ ಸರ್ಕಾರದ ವಕ್ತಾರ ಝಬಿವುಲ್ಲ ಮುಜಾಹಿದ್ ಹೇಳಿಕೆ ನೀಡಿದ್ದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
‘ಸಾಮಾನ್ಯ ಜನರ ಮನೆಗಳನ್ನೆ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಪಕ್ತಿಕದಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಖೋಸ್ಟ್ನಲ್ಲಿ ಒಂದು ಮನೆ ಸಂಪೂರ್ಣ ನಾಶವಾಗಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.
‘ಪಾಕಿಸ್ತಾನವು ಹಿಂಸಾತ್ಮಕ ಚಟುವಟಿಕೆಗಳ ನಿಯಂತ್ರಣದ ವೈಫಲ್ಯ ಮತ್ತು ಸಮಸ್ಯೆಗಳಿಗೆ ಅಫ್ಗಾನಿಸ್ತಾನವನ್ನು ಹೊಣೆಗಾರರನ್ನಾಗಿಸುವುದನ್ನು ನಿಲ್ಲಿಸಬೇಕು. ಇಂತಹ ಕೃತ್ಯಗಳು ಪಾಕಿಸ್ತಾನದ ಹಿಡಿತಕ್ಕೆ ಸಿಗದ ಭೀಕರ ಪರಿಣಾಮಗಳಿಗೆ ಕಾರಣವಾಗಬಹುದು’ ಎಂದು ಎಚ್ಚರಿಕೆ ನೀಡಲಾಗಿದೆ.
ಪಾಕಿಸ್ತಾನದ ಉತ್ತರ ವಾಜಿರಿಸ್ತಾನ್ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಏಳು ಯೋಧರ ಸಾವಿಗೆ ಕಾರಣರಾದ ಭಯೋತ್ಪಾದಕರ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಹೇಳಿಕೆ ನೀಡಿದ ಮರುದಿನವೇ ಈ ದಾಳಿ ನಡೆದಿದೆ.