80ರ ದಶಕದ ಖ್ಯಾತ ಹಿರಿಯ ನಟಿ, ಪರಸಂಗದ ಗೆಂಡೆ ತಿಮ್ಮ ಸಿನಿಮಾ ಖ್ಯಾತಿಯ ರೀಟಾ ಅಂಚನ್ ರಾಧಾಕೃಷ್ಣ ನಿಧನರಾಗಿದ್ದಾರೆ. ಪರಸಂಗದ ಗೆಂಡೆ ತಿಮ್ಮ ಸಿನಿಮಾದಲ್ಲಿ ರೀಟಾ ನಟ ಲೋಕೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ರೀಟಾ ಅಂಚನ್ ರಾಧಾಕೃಷ್ಣ’ಪರಸಂಗದ ಗೆಂಡೆತಿಮ್ಮ’ ಸಿನಿಮಾದಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದರೂ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ದಿನ ಉಳಿದುಕೊಳ್ಳಲಾಗಲಿಲ್ಲ. 68 ವರ್ಷ ವಯಸ್ಸಿನ ರೀಟಾ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೀಟಾ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ. ಕೆಲವೇ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರೂ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದರು. ಈ ನಟಿಯ ನಿಧನದ ಸುದ್ದಿಯನ್ನು ನಿರ್ದೇಶಕ ರಘುರಾಮ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರೀಟಾ ಅಂಚನ್ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಅವರನ್ನು ಬಹುತೇಕವಾಗಿ ಗುರುತಿಸುತ್ತಿದ್ದಿದ್ದು ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ಮೂಲಕವೇ. 1978ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ರೀಟಾ ಅಂಚನ್ ಬೋಲ್ಡ್ ರೋಲ್ನಲ್ಲಿ ನಟಿಸಿದ್ದರು. ಲೋಕೇಶ್ ಅಂತಹ ದಿಗ್ಗಜರ ಮುಂದೆ ನಟಿಸಿ ರೀಟಾ ಅಂಚನ್ ಪ್ರೇಕ್ಷಕರ ಗಮನ ಸೆಳೆದಿದ್ದರು.
ರೀಟಾ ಅಂಚನ್ ‘ಕರಾವಳಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ಬಹುಭಾಷೆಯ ನಟಿಯಾಗಿದ್ದರು. ಕನ್ನಡ ಸೇರಿದಂತೆ ಹಿಂದಿ, ಗುಜರಾತಿ, ಪಂಜಾಬಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ಜೊತೆ ‘ಅನುರಿಕ್ತೆ’, ‘ ಧರ್ಮ ದಾರಿ ತಪ್ಪಿತು’, ‘ಕನಕಾಂಬರ’ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ‘ಬದ್ನಾಂ’, ‘ಗರ್ಲ್ ಜವಾನ್ ಹೋಗಯಾ’, ‘ಆತ್ಮ’, ‘ಫರ್ಜ್ ಊರ್ ಪ್ಯಾರ್’ ಅಂತಹ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ರೀಟಾ ಅಂಚನ್ ಅವರಿಗೆ ನಟ ಹಾಗೂ ಉಧ್ಯಮಿಯಾಗಿದ್ದ ರಾಧಾಕೃಷ್ಣ ಮಂಚಿಗಯ್ಯ ಅವರ ಮೇಲೆ ಒಂದೇ ಸಿನಿಮಾದಲ್ಲಿಯೇ ಪ್ರೀತಿ ಹುಟ್ಟಿತ್ತು. 1978ರಲ್ಲಿ ಇಬ್ಬರು ವಿವಾಹವಾದರು. ಆ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರಿಗೆ ಅಭಿಷೇಕ್ ಹಾಗೂ ಐಶ್ವರ್ಯಾ ಎಂಬ ಇಬ್ಬರು ಮಕ್ಕಳು ಇದ್ದಾರೆ. ವಿವಾಹದ ಬಳಿಕ ಸಿನಿಮಾದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು.