ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಹೆಸರು ಡ್ರಗ್ಸ್ ಕೇಸ್ನಲ್ಲಿ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ನಲ್ಲಿ ರಾಗಿಣಿ ಅವರನ್ನು ಬಂಧಿಸಲಾಗಿತ್ತು. ಹಲವು ದಿನ ಜೈಲಿನಲ್ಲೂ ಇದ್ದು ಬಂದಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಡ್ರಗ್ಸ್ ಕೇಸ್ನಲ್ಲಿ ರಾಗಿಣಿ ನಿರಪರಾಧಿ ಎಂಬುದು ಸಾಬೀತಾಗಿದೆ. ನಟಿಯ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಕೇಸ್ ಖುಲಾಸೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ.
ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ ಆರೋಪ ರಾಗಿಣಿ ಮೇಲೆ ಕೇಳಿ ಬಂದಿತ್ತು. ಪಾರ್ಟಿ ಆಯೋಜಿಸಿ ಡ್ರಗ್ಸ್ ಬಳಕೆಗೂ ಅವರು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿತ್ತು. ಈ ಕಾರಣಕ್ಕೆ ಎನ್ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಸಿಕ್ಕದ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಕೇವಲ ಸಹ ಆರೋಪಿಗಳ ಹೇಳಿಕೆ ಆಧರಿಸಿ ರಾಗಿಣಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದರೆ, ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ರಾಗಿಣಿ ಪರ ವಕೀಲ ಎ. ಮೊಹಮ್ಮದ್ ತಾಹಿರ್ ವಾದ ಮಾಡಿದ್ದರು. ಈ ವಾದವನ್ನು ಪರಿಣಿಸಿದ ನ್ಯಾಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠ ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸಿದೆ. ಎ 4 ಪ್ರಶಾಂತ್ ರಂಕಾ ವಿರುದ್ಧದ ಪ್ರಕರಣ ಕೂಡ ರದ್ದಾಗಿದೆ.