ಸ್ಯಾಂಡಲ್ ವುಡ್ ಖ್ಯಾತ ನಟಿ ರಚಿತಾ ರಾಮ್ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ. ಅಕ್ಟೋಬರ್ 3ರಂದು ರಚಿತಾ ರಾಮ್ 32ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ ನಟಿ ಫ್ಯಾನ್ಸ್ ಬಳಿ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ರಚಿತಾ ರಾಮ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾರೆ. ಸೀರೆಯುಟ್ಟು, ಅದಕ್ಕೆ ತಕ್ಕ ಆಭರಣ ತೊಟ್ಟು, ಹಣೆಗೆ ಬಿಂದಿ ಇಟ್ಟು, ಮಲ್ಲಿಗೆ ಮುಡಿದು ಸಾಂಪ್ರದಾಯಿಕ ನೋಟದಲ್ಲಿ ಬಹಳ ಸೊಗಸಾಗಿ ಕಾಣಿಸಿಕೊಂಡಿರುವ ಫೋಟೋವನ್ನು ನಟಿ ಪೋಸ್ಟ್ ಮಾಡಿದ್ದಾರೆ.
‘ಎಲ್ಲರಿಗೂ ನಮಸ್ಕಾರ. ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತಾ, ಈ ಬಾರಿ ಚಿತ್ರೀಕರಣ ಇರುವುದರಿಂದ ನನ್ನ ಹುಟ್ಟುಹಬ್ಬ (ಅಕ್ಟೋಬರ್ 3) ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲು ಇಚ್ಚಿಸುತ್ತೇನೆ. ಎಲ್ಲರಿಗೂ ಕ್ಷಮೆ ಯಾಚಿಸುತ್ತಾ, ಎಂದಿನಂತೆ ಪ್ರತೀ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ.’ – ನಿಮ್ಮ ಪ್ರೀತಿಯ ರಚ್ಚು ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ಗೆ ಲವ್ ಯೂ ಆಲ್ ಎಂಬ ಕ್ಯಾಪ್ಷನ್ ನೀಡಿದ್ದಾರೆ.
ಕಳೆದ ವರ್ಷ ಕನ್ನಡಿಗರು ಕಾವೇರಿಗಾಗಿ ಹೋರಾಟ ಮಾಡುತ್ತಿದ್ದ ಹಿನ್ನೆಲೆ ರಚಿತಾ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದ ನಟಿ, ‘ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈ ವರ್ಷ ನನ್ನ ಹುಟ್ಟುಹಬ್ಬ ಆಚರಿಸುವುದು ಸೂಕ್ತವಲ್ಲ ಎಂದನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ದಯೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿ’ ಎಂದು ತಿಳಿಸಿದ್ದರು.
ರಚಿತಾ ರಾಮ್ 1992ರ ಅಕ್ಟೋಬರ್ 3ರಂದು ಬೆಂಗಳೂರಿನಲ್ಲಿ ಜನಿಸಿದರು. ಗುರುವಾರ 32ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ‘ಅರಸಿ’ ಸಿರಿಯಲ್ ಮೂಲಕ ಜನಪ್ರಿಯರಾದ ರಚಿತಾ ಅವರು ದರ್ಶನ್ ಅವರ ‘ಬುಲ್ ಬುಲ್’ ಚಿತ್ರದ ಮೂಲಕ ಕನ್ನಡ ಹಿರಿತೆರೆ ಪ್ರವೇಶಿಸಿದರು. ಚೊಚ್ಚಲ ಚಿತ್ರದಲ್ಲೇ ಸ್ಟಾರ್ ನಟನೊಂದಿಗೆ ತೆರೆ ಹಂಚಿಕೊಂಡ ನಟಿ, ನಂತರದ ದಿನಗಳಲ್ಲಿ ಹಲವು ಸೂಪರ್ ಸ್ಟಾರ್ಗಳೊಂದಿಗೆ ಅಭಿನಯಿಸಿ ಮತ್ತಷ್ಟು ಖ್ಯಾತಿ ಘಳಿಸಿದರು. ರಚಿತಾ ರಾಮ್ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ.