ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕಿನಿಂದ ಪಡೆದ 18 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಿಜೆಪಿಗೆ ನೀಡಿದ್ದರು ಎಂದು ಆರೋಪಿಸಿದ ಕೇರಳ ಕಾಂಗ್ರೆಸ್ ಘಟಕವನ್ನು ಬಾಲಿವುಡ್ ನಟಿ ಪ್ರೀತಿ ಝಿಂಟಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇರಳ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಮಾಡಲಾದ ಟ್ವೀಟ್ ಗೆ ಪ್ರೀತಿ ಝಿಂಟಾ ಆಕ್ರೋಶಗೊಂಡಿದ್ದಾರೆ. ಕೇರಳ ಕಾಂಗ್ರೆಸ್ ಮಾಡಿರುವ ಟ್ವೀಟ್ನಲ್ಲಿ ಪ್ರೀತಿ ಝಿಂಟಾ ಮಾಡಿದ್ದ 18 ಕೋಟಿ ಸಾಲವನ್ನು ಬಿಜೆಪಿ ಪಕ್ಷ ಮನ್ನಾ ಮಾಡಿದೆ, ಇದಕ್ಕಾಗಿ ಪ್ರೀತಿ ಝಿಂಟಾ, ಬಿಜೆಪಿಯ ಗುಣಗಾನ ಮಾಡುತ್ತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿತ್ತು. ಕೇರಳ ಕಾಂಗ್ರೆಸ್ನ ಈ ಟ್ವೀಟ್ಗೆ ಪ್ರೀತಿ ಝಿಂಟಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಪ್ರೀತಿ ಝಿಂಟಾ, ‘ನನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ನಾನೇ ನಿಭಾಯಿಸುತ್ತೇನೆ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುತ್ತಿರುವ ನಿಮಗೆ ನಾಚಿಕೆಯಾಗಬೇಕು, ಯಾರೂ ಸಹ ನಾನು ಮಾಡಿದ ಸಾಲವನ್ನು ಮನ್ನಾ ಮಾಡಿಲ್ಲ. 18 ಕೋಟಿ ಸಾಲವನ್ನು 10 ವರ್ಷದ ಹಿಂದೆಯೇ ತೀರಿಸಿದ್ದೇನೆ’ ಎಂದು ಪ್ರೀತಿ ಝಿಂಟಾ ಪ್ರತಿಕ್ರಿಯೆ ನೀಡಿದ್ದರು.
ಬಳಿಕ ಮತ್ತೆ ಟ್ವೀಟ್ ಮಾಡಿರುವ ಪ್ರೀತಿ ಝಿಂಟಾ, ‘ಬೇರೆ ಕೆಲ ನಟರಂತೆ ನಿಮ್ಮ ಖಾತೆಯನ್ನು ನಟೋರಿಯಸ್ ಐಟಿ ಸೆಲ್ಗಳಿಗೆ ನೀಡದೇ ನೀವೇ ಆಪರೇಟ್ ಮಾಡುತ್ತಿರುವುದು ಕೇಳಿ ಸಂತೋಷವಾಯ್ತು. ಆದರೆ ನೀವು ಸೇರಿದಂತೆ ಹಲವು ಪ್ರಮುಖರ ಸಾಲ ಮನ್ನಾ ಮಾಡಿರುವ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿದ್ದು, ಅದರ ಆಧಾರವಾಗಿಯೇ ನಾವು ಪೋಸ್ಟ್ ಹಂಚಿಕೊಂಡಿದ್ದೆವು. ಒಂದೊಮ್ಮೆ ನಮ್ಮಿಂದ ತಪ್ಪು ಆಗಿದ್ದಲ್ಲಿ ಅದನ್ನು ತಿದ್ದುಕೊಳ್ಳಲು ಸಿದ್ಧ ಇದ್ದೇವೆ’ ಎಂದಿದೆ ಕೇರಳ ಕಾಂಗ್ರೆಸ್.
ಏನಿದು ಆರೋಪ
ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೇರಳ ಕಾಂಗ್ರೆಸ್, ಸುದ್ದಿವಾಹಿನಿಯೊಂದರ ಪೋಸ್ಟ್ ನ್ನು ಹಂಚಿಕೊಂಡು, ಪ್ರೀತಿ ಝಿಂಟಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಿಜೆಪಿಗೆ ನೀಡಿ 18 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿಸಿಕೊಂಡಿದ್ದರು. ಕಳೆದ ವಾರ ಬ್ಯಾಂಕ್ ಆರ್ಥಿಕವಾಗಿ ತೀವ್ರ ನಷ್ಟ ಹೊಂದಿ ಠೇವಣಿದಾರರು ತಮ್ಮ ಹಣಕ್ಕಾಗಿ ಬೀದಿಗಿಳಿದಿದ್ದಾರೆ ಎಂದು ಟೀಕಿಸಿತ್ತು.