ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕೆಜಿಎಫ್ ಬಳಿಕ ಯಶ್ ನಟನೆಯ ಮುಂದಿನ ಸಿನಿಮಾ ‘ಟಾಕ್ಸಿಕ್’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಮಧ್ಯೆ ಯಶ್ ಹಿಂದಿಯ ‘ರಾಮಾಯಣ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಬಗ್ಗೆ ಯಶ್ ಪ್ರತಿಕ್ರಿಯಿಸಿದ್ದಾರೆ.
ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರ ಜೊತೆಗೆ ಯಶ್ ಕೂಡ ಕೈ ಜೋಡಿಸಿದ್ದಾರೆ. ‘ವೆರೈಟಿ ಮ್ಯಾಗಜಿನ್’ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಿನಿಮಾ ನಿರ್ಮಾಣದ ಹಿಂದಿನ ಕಾರಣ ತಿಳಿಸಿದ್ದಾರೆ. ‘ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂಬುದು ನನ್ನ ದೀರ್ಘಕಾಲದ ಆಕಾಂಕ್ಷೆ ಆಗಿತ್ತು. ಅದರ ಅನ್ವೇಷಣೆಯಲ್ಲಿ ನಾನು ಲಾಸ್ ಏಂಜಲೀಸ್ಗೆ ಹೋಗಿದ್ದೆ. ಅತ್ಯುತ್ತಮ ವಿಎಫ್ಎಕ್ಸ್ ಸ್ಟುಡಿಯೋಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಅಲ್ಲಿದ್ದೆ. ಭಾರತೀಯ ಸಿನಿಮಾದ ದೃಷ್ಟಿಯಲ್ಲಿ ನನ್ನ ಮತ್ತು ನಮಿತ್ ಆಲೋಚನೆಗಳು ಹೊಂದುತ್ತವೆ’ ಎಂದಿದ್ದಾರೆ.
‘ನಾವು ವಿವಿಧ ಯೋಜನೆಗಳ ಬಗ್ಗೆ ಚರ್ಚೆ ಮಾಡಿದೆವು. ಆಗ ರಾಮಾಯಣದ ವಿಷಯವೂ ಬಂದಿತು. ನಮಿತ್ ಆಗಲೇ ಕೆಲಸದಲ್ಲಿ ತೊಡಗಿಕೊಂಡಿದ್ದರು. ರಾಮಾಯಣವು ಒಂದು ವಿಷಯವಾಗಿ ನನ್ನಲ್ಲಿ ಆಳವಾಗಿ ಪ್ರತಿಧ್ವನಿಸುತ್ತದೆ. ನನ್ನ ಮನಸ್ಸಿನಲ್ಲಿ ಅದರ ಬಗ್ಗೆ ಒಂದು ಆಲೋಚನೆ ಇತ್ತು. ಹೀಗಾಗಿ ನಾನು ಸಹ ನಿರ್ಮಾಪಕನಾದೆ’ ಎಂದಿದ್ದಾರೆ ಯಶ್.
‘ರಾಮಾಯಣ’ ಸಿನಿಮಾ ಮೂರು ಭಾಗದಲ್ಲಿ ಬರಲಿದೆ ಎನ್ನಲಾಗಿತ್ತಿದೆ. ಈ ಸಿನಿಮಾನ ಬೇರೆ ಬೇರೆ ಭಾಷೆಯಲ್ಲಿ ವಿಶ್ವಾದ್ಯಂತ ರಿಲೀಸ್ ಮಾಡೋ ಸಾಧ್ಯತೆ ಇದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ರಾಮ-ಸೀತೆಯಾಗಿ ನಟಿಸುತ್ತಿದ್ದಾರೆ. ನಿತೇಶ್ ತಿವಾರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ಲಾರಾ ದತ್ತ ಸೇರಿ ಅನೇಕರು ಬಣ್ಣ ಹಚ್ಚುತ್ತಿದ್ದಾರೆ.