ತಮಿಳು ಸ್ಟಾರ್ ನಟ ವಿಜಯ್ ಹಾಗೂ ಖ್ಯಾತ ನಟಿ ತ್ರಿಷಾ ಇತ್ತೀಚೆಗೆ ಪದೇ ಪದೇ ಸುದ್ದಿಯಾಗ್ತಿದ್ದಾರೆ. ಈ ಹಿಂದೆ ಕೆಲ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದ ಜೋಡಿ ಇದೀಗ ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಇದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
ತ್ರಿಷಾ ಹಾಗೂ ವಿಜಯ್ ಪರಸ್ಪರ ರಿಲೇಷನ್ ಶಿಪ್ನಲ್ಲಿದ್ದಾರೆ. ಇದೇ ಕಾರಣಕ್ಕೆ ವಿಜಯ್ ತಮ್ಮ ಪತ್ನಿಗೆ ಡಿವೋರ್ಸ್ ನೀಡುತ್ತಿದ್ದಾರೆ ಎಂಬ ಸುದ್ದಿ ಕಳೆ ಕೆಲ ವರ್ಷಗಳಿಂದಲೂ ಕೇಳಿ ಬರ್ತಿದೆ. ಅಸಲಿಗೆ ಈ ಇಬ್ಬರ ಸಂಬಂಧದ ಬಗ್ಗೆ ಹತ್ತು ವರ್ಷದ ಹಿಂದೆಯೂ ಸುದ್ದಿಯಾಗಿತ್ತು. ಇದೀಗ ಇಬ್ಬರು ಒಟ್ಟಿಗೆ ಖಾಸಗಿ ವಿಮಾನದಲ್ಲಿ ಟ್ರಾವೆಲ್ ಮಾಡುವ ಚಿತ್ರಗಳು ವೈರಲ್ ಆಗಿದ್ದು, ಈಗ ಮತ್ತೆ ಅದೇ ಸುದ್ದಿಗಳು ಹರಿದಾಡುತ್ತಿವೆ. ಇಬ್ಬರ ಫೋಟೋ ಬಗ್ಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ತ್ರಿಷಾ ಹಾಗೂ ವಿಜಯ್ ಫೋಟೋ ವೈರಲ್ ಆಗಿರುವ ಹಿಂದೆ ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆಯ ಐಟಿ ಸೆಲ್ ಹಾಗೂ ರಾಜ್ಯದ ಗುಪ್ತಚರ ಇಲಾಖೆಯ ಕೈವಾಡ ಇದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಜಯ್ ಮತ್ತು ತ್ರಿಷಾ ಅವರುಗಳು ಭದ್ರತಾ ಪರೀಕ್ಷೆಗೆ ಒಳಗಾಗುವ ವೇಳೆ ರಾಜ್ಯ ಗುಪ್ತಚರ ಇಲಾಖೆಯವರು ಅವರಿಬ್ಬರ ವಿಡಿಯೋಗಳನ್ನು ಗುಟ್ಟಾಗಿ ತೆಗೆದು ಅವುಗಳನ್ನು ವೈರಲ್ ಮಾಡಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.
‘ವಿಜಯ್ ಇತ್ತೀಚೆಗಷ್ಟೆ ರಾಜಕೀಯಕ್ಕೆ ಬಂದಿದ್ದಾರೆ. ಅವರು ಕಳೆದ ವಾರ ಮದುವೆಗೆಂದು ಗೋವಾಕ್ಕೆ ಹೋಗಿದ್ದರು. ವಿಮಾನ ನಿಲ್ದಾಣದ ಗೇಟ್ ನಂ.6ರಲ್ಲಿ ಭದ್ರತಾ ತಪಾಸಣೆ ನಡೆಸಿ ಖಾಸಗಿ ವಿಮಾನದಲ್ಲಿ ತೆರಳಿದರು. ಆದರೆ ಅವರು ಫೊಟೊ ಲೀಕ್ ಆಗಿದೆ. ವಿಜಯ್ ಮದುವೆಗೆ ಯಾರೊಂದಿಗೆ ಬೇಕಾದರೂ ಹೋಗಬಹುದು. ಅದು ಅವರ ವೈಯಕ್ತಿಕ ಆಯ್ಕೆ, ಆದರೆ ಆ ಫೋಟೋ ತೆಗೆದು ಬಿಡುಗಡೆ ಮಾಡಿದವರು ಯಾರು? ಆ ಫೋಟೊಗಳನ್ನು ಡಿಎಂಕೆ ಐಟಿ ವಿಂಗ್ ಕೈಗೆ ಕೊಟ್ಟಿದ್ದು ಯಾರು? ಎಂದು ಅಣ್ಣಾಮಲೈ ಪ್ರಶ್ನೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಗೋವಾನಲ್ಲಿ ಕೀರ್ತಿ ಸುರೇಶ್ ಮತ್ತು ಆಂಟೊನಿ ತಟ್ಟಿಲ್ ಅವರ ವಿವಾಹ ನಡೆದಿತ್ತು. ಈ ಮದುವೆಗೆಂದು ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಹೋಗಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ರಾಜಕೀಯಕ್ಕೆ ಇಳಿದಿರುವ ವಿಜಯ್ ಅವರ ಈ ಚಿತ್ರಗಳನ್ನು ಎದುರಾಳಿ ಪಕ್ಷಗಳು ಬಳಸಿಕೊಂಡು ಮಾನಹಾನಿಗೆ ಇಳಿದಿದ್ದಾರೆ ಎನ್ನಲಾಗುತ್ತಿದೆ.