ತಮಿಳಿನ ಖ್ಯಾತ ಖಳನಟ ಮನ್ಸೂರ್ ಅಲಿಖಾನ್ ಮತ್ತೆ ಕಲಾವಿದರ ವಿರುದ್ಧ ಸಿಡಿದೆದ್ದಿದ್ದಾರೆ. ದಕ್ಷಿಣದ ಹೆಸರಾಂತ ತಾರೆ ತ್ರಿಷಾ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದ ಮನ್ಸೂರ್ ಮೇಲೆ ಕಲಾವಿದರು ಮತ್ತು ತಂತ್ರಜ್ಞರು ಮುಗಿ ಬಿದ್ದಿದ್ದರು. ಅದರಲ್ಲೂ ಖ್ಯಾತ ನಟ ಚಿರಂಜೀವಿ (Chiranjeevi), ತ್ರಿಷಾ ಮತ್ತು ಖುಷ್ಬೂ (Khushboo) ಪ್ರತಿಕ್ರಿಯೆ ನೀಡಿದ್ದರು. ಮನ್ಸೂರ್ ವಿರುದ್ಧ ದೂರು ಕೂಡ ನೀಡಲಾಗಿತ್ತು. ಆ ನಂತರ ಮನ್ಸೂರ್ ಕ್ಷಮೆ ಕೂಡ ಕೇಳಿದ್ದರು.
ಅಲ್ಲಿಗೆ ಪ್ರಕರಣ ಸುಖಾಂತ್ಯವಾಗಿದೆ ಎಂದು ನಂಬಲಾಗಿತ್ತು. ಆದರೆ, ಮನ್ಸೂರ್ ಅಲಿಖಾನ್ ಮತ್ತೆ ಆ ಮೂವರು ಕಲಾವಿದರ ವಿರುದ್ಧ ಸಿಡಿದೆದ್ದಿದ್ದಾರೆ. ತಮ್ಮ ಮೇಲೆ ಸಲ್ಲದ ಆರೋಪ ಮಾಡಿರುವ ಚಿರಂಜೀವಿ, ತ್ರಿಷಾ ಮತ್ತು ಖುಷ್ಬೂ ವಿರುದ್ಧ ಮಾನನಷ್ಟ ಮೊಕದ್ದಮೆ (Defamation Suit) ಹೂಡುವುದಾಗಿ ಅವರು ತಿಳಿಸಿದ್ದಾರೆ.
ತ್ರಿಷಾಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಮನ್ಸೂರ್ ಅಲಿ ಖಾನ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನ್ನೈನ ಥೌಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಬರಲು ಆಗುವುದಿಲ್ಲ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದ. ಜೊತೆಗೆ ಜಾಮೀನು ಅರ್ಜಿಯನ್ನೂ (Court) ಸಲ್ಲಿಸಿದ್ದ. ಆದರೆ, ಡಿಢೀರ್ ಅಂತ ಮನಸ್ಸು ಬದಲಾಯಿಸಿ ಪೊಲೀಸ್ ಠಾಣೆಗೆ ಹಾಜರಾಗಿದ್ದ.
ಇತ್ತ ಜಾಮೀನು ಅರ್ಜಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಿರೀಕ್ಷೆ ಜಾಮೀನು (Bail) ಸ್ವೀಕೃತವಾಗಿರಲಿಲ್ಲ. ಹಾಗಾಗಿ ನ್ಯಾಯಾಧೀಶರು ಛೀಮಾರಿ ಹಾಕಿದ್ದರು. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯ ಗರಂ ಆಗಿತ್ತು. ಹಾಗಾಗಿ ಮನ್ಸೂರ್ ಅಲಿ ಖಾನ್ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದರು.