ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಆರೋಪಿಯು ತಾನೇ ಸೈಫ್ ಮೇಲೆ ಹಲ್ಲೆ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ. ಆದ್ರೆ ಇದೀಗ ತನಿಖೆಯ ವೇಳೆ ಮತ್ತೊಂದು ವರದಿ ಬಂದಿದ್ದು ಅಧಿಕಾರಿಗಳ ವಿಚಾರಣೆಯನ್ನು ಮತ್ತಷ್ಟು ತೀವ್ರ ಗೊಳಿಸಿದ್ದಾರೆ.
ಸೈಫ್ ಮೇಲೆ ಹಲ್ಲೆ ನಡೆದ ಬಾಂದ್ರಾದ ನಿವಾಸದಿಂದ ಸಂಗ್ರಹಿಸಲಾದ 19 ಸೆಟ್ ಬೆರಳಚ್ಚುಗಳು ಬಂಧಿತ ಆರೋಪಿ ಶರೀಫುಲ್ ಇಸ್ಲಾಂನ ಬೆರಳಚ್ಚುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಪ್ರಕರಣದ ತನಿಖೆಯಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಮುಂಬೈ ಪೊಲೀಸರು ಸೈಫ್ ಅಲಿ ಖಾನ್ ಮನೆಯಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ರಾಜ್ಯ ಅಪರಾಧ ತನಿಖಾ ವಿಭಾಗದ(ಸಿಐಡಿ) ಫಿಂಗರ್ ಫ್ರಿಂಟ್ ಬ್ಯೂರೋಗೆ ಕಳುಹಿಸಿದ್ದಾರೆ. ಬೆರಳಚ್ಚುಗಳನ್ನು ಪರಿಶೀಲನೆ ನಡೆಸಿದಾಗ ಬಂಧಿತ ಆರೋಪಿ ಶರೀಫುಲ್ ಬೆರಳಚ್ಚುಗಳಿಗೆ ಹೊಂದಿಕೆಯಾಗಿಲ್ಲ. ಪರೀಕ್ಷೆಯ ಫಲಿತಾಂಶವನ್ನು ʼನೆಗೆಟಿವ್ʼ ಎಂದು ಮುಂಬೈ ಪೊಲೀಸರಿಗೆ ಸಿಐಡಿ ಮಾಹಿತಿ ನೀಡಿದೆ. ಮುಂಬೈ ಪೊಲೀಸರು ಈ ಕುರಿತು ಹೆಚ್ಚಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.
ಜನವರಿ 15ರಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿ ದರೋಡೆಗೆ ಯತ್ನಿಸಿ ಅವರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದ. ಸೈಫ್ ಅಲಿ ಖಾನ್ ದೇಹದ ಮೇಲೆ 6 ಗಾಯದ ಗುರುತುಗಳು ಪತ್ತೆಯಾಗಿದ್ದವು. ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಐದು ದಿನಗಳ ಚಿಕಿತ್ಸೆ ಬಳಿಕ ಮಂಗಳವಾರ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದು ಸದ್ಯ ನಟ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.