ದರ್ಶನ್ (Darshan) ನಟನೆಯ ಕಾಟೇರ (Katera) ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅದ್ಭುತ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ದರ್ಶನ್ ಸಿನಿಮಾ ಕುರಿತಾದ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕಥೆಯು ನೈಜ ಘಟನೆಯನ್ನು ಆಧರಿಸಿದ್ದು, ಅದು ಇಂದಿರಾ ಗಾಂಧಿ (Indira Gandhi) ಕಾಲದ ಕಥೆಯಾಗಿದೆ ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಅದು 1974ರ ಕಾಲ. ಉಳುವವನೆ ಭೂಮಿಯ ಒಡೆಯ ಕಾನೂನು ಬಂದಾಗ ನಡೆದಿರುವ ಘಟನೆ. ಆವಾಗ ಬಾವಿಯೊಂದರಲ್ಲಿ ತುಂಬಾ ಜನರ ಮೂಳೆಗಳು ಸಿಕ್ಕಿದ್ದವು. ಆ ಮೂಳೆಗಳು ಯಾರವು ಅಂತ ಯಾರಿಗೂ ಗೊತ್ತಿಲ್ಲ. ಆ ಕಹಿ ಘಟನೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ ಎಂದಿದ್ದಾರೆ ದರ್ಶನ್.
ಇದೇ ಡಿಸೆಂಬರ್ 29 ರಂದು ತೆರೆಗೆ ಬರಲು ಸಜ್ಜಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಾಲಾಶ್ರೀ ಪುತ್ರಿ ಆರಾಧನಾ ಜೊತೆಯಾಗಿ ನಟಿಸಿರುವ ʻಕಾಟೇರʼ ಚಿತ್ರದ ಟ್ರೈಲರ್ ಶನಿವಾರ ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿದೆ. ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ರೈಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕರಾದ ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ ಸಾಥ್ ನೀಡಿದರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಚಿತ್ರ ತಂಡಕ್ಕೆ ಆಲ್ ದ ಬೆಸ್ಟ್ ಹೇಳಿದರು.
ರಾಕ್ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುದೀರ್ ನಿರ್ದೇಶನದ ಕಾಟೇರ ಚಿತ್ರ ಇದೇ ತಿಂಗಳು 29ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ನಟ ದರ್ಶನರ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರ ಭಾರೀ ಹೈಪ್ ಕ್ರಿಯೆಟ್ ಮಾಡಿದೆ. ಬಹಳ ದಿನಗಳ ಬಳಿಕ ಡಿ ಬಾಸ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಮತ್ತು ಸಾಂಗ್ ಯೂಟ್ಯೂಬ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ವಾಣಿಜ್ಯ ನಗರಿಯಲ್ಲಿ ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆಗೊಳಿಸಲಾಗಿದೆ.