ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರ ನವದೆಹಲಿ ಮನೆಯಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಟಾಲಿವುಡ್ ನಟ, ಮೆಗಾಸ್ಟಾರ್ ಚಿರಂಜೀವಿ, ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ ಸೇರಿದಂತೆ ಇನ್ನೂ ಹಲವರು ಭಾಗಿಯಾಗಿ ಸಂಭ್ರಮಿಸಿದ್ದಾರೆ.
ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ಅಂತೆಯೇ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರ ನವದೆಹಲಿಯಲ್ಲಿರುವ ನಿವಾಸದಲ್ಲಿ ಸಂಕ್ರಾಂತಿ ಹಬ್ಬದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಟ ಚಿರಂಜೀವಿ, ಪಿವಿ ಸಿಂಧೂ, ಹಲವು ಕೇಂದ್ರ ಸಚಿವರು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಬ್ಬವನ್ನು ಎಂಜಾಯ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ದೀಪ ಬೆಳಗಿಸಲು ನಟ ಚಿರಂಜೀವಿ ಅವರು ಪ್ರಧಾನಿ ಮೋದಿ ಅವರೊಂದಿಗೆ ನಡೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಪೂಜಾ ಸಮಾರಂಭ ಮತ್ತು ದೀಪೋತ್ಸವದ ನಂತರ ಗಾಯಕಿ ಸುನೀತಾ ತಮ್ಮ ಗಾಯನದ ಮೂಲಕ ಪ್ರತಿಯೊಬ್ಬರನ್ನು ರಂಜಿಸಿದರು.
ಪ್ರಧಾನಿ ನರೇಂದ್ರ ಮೋದಿ ಜೊತೆ ಚಿರಂಜೀವಿ ಕಾಣಿಸಿಕೊಂಡ ಬಳಿಕ ಮತ್ತೆ ಮೆಗಾ ಪಾಲಿಟಿಕ್ಸ್ ಶುರುವಾಗುತ್ತಾ ಎನ್ನುವ ಪ್ರಶ್ನೆ ಶುರುವಾಗಿದೆ.