ಕನ್ನಡದ ಹೆಸರಾಂತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ (Jolly Bastin) ನಿಧನಕ್ಕೆ ನಟ, ನಿರ್ದೇಶಕ ದುನಿಯಾ ವಿಜಯ್ ಕಂಬನಿ ಮಿಡಿದಿದ್ದಾರೆ. ಇತ್ತೀಚೆಗಷ್ಟೇ ಜಾಲಿ ಮಾಸ್ಟರ್ ಜೊತೆ ವಿಜಯ್ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ದುನಿಯಾ ವಿಜಯ್ (Duniya Vijay) ನಿರ್ದೇಶಿಸಿ, ನಟಿಸುತ್ತಿರುವ ಭೀಮ ಚಿತ್ರಕ್ಕೆ ಜಾಲಿ ಬಾಸ್ಟಿನ್ ಅವರ ಸಾಹಸ ನಿರ್ದೇಶನವಿದೆ. ಅತ್ಯುತ್ತಮ ಸಾಹಸ ನಿರ್ದೇಶಕನನ್ನು ಕಳೆದುಕೊಂಡಿರುವುದಾಗಿ ವಿಜಯ್ ಬರೆದುಕೊಂಡಿದ್ದಾರೆ.
ಮಲಯಾಳಂ ಮೂಲದ, ಕನ್ನಡಿಗರೇ ಆಗಿರುವ ಜಾಲಿ ಬಾಸ್ಟಿನ್ ನಿನ್ನೆ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಚಿತ್ರಗಳಿಗೆ ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡಿರುವ ಜಾಲಿ ಬಾಸ್ಟಿನ್, ಬಹುಬೇಡಿಕೆ ಸ್ಟಂಟ್ ಮಾಸ್ಟರ್ ಆಗಿದ್ದರು.
ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಜಾಲಿ ಬಾಸ್ಟಿನ್, ಕ್ರೇಜಿಸ್ಟಾರ್ ರವಿಚಂದ್ರನ್ ಕಣ್ಣಿಗೆ ಬಿದ್ದು, ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಪ್ರೇಮಲೋಕ ಸೇರಿದಂತೆ ರವಿಚಂದ್ರನ್ ಅವರ ಬಹುತೇಕ ಚಿತ್ರಗಳಿಗೆ ಇವರ ಸಾಹಸ ನಿರ್ದೇಶನವಿದೆ. ಶಾಂತಿ ಕ್ರಾಂತಿಗಾಗಿ ಮಾಡಿದ ಸಾಹಸ ದೃಶ್ಯಗಳ ಕಂಪೋಸ್ ಇವತ್ತಿಗೂ ನೆನಪಿನಲ್ಲಿ ಉಳಿಯುವಂಥದ್ದು.
ಕೇರಳದಲ್ಲಿ 1966ರಲ್ಲಿ ಜಾಲಿ ಬಾಸ್ಟಿನ್ ಹುಟ್ಟಿದ್ದರೂ, ಬೆಳೆದದ್ದು ಬೆಂಗಳೂರಿನಲ್ಲಿ. ಇಲ್ಲಿಯೇ ನೆಲೆಯೂರಿ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾಗಾಗಿ ಕೆಲಸ ಮಾಡಿದ್ದರು.
ಡಿಸೆಂಬರ್ ಬಂತೆಂದರೆ ಒಂದು ರೀತಿಯಲ್ಲಿ ಚಿತ್ರೋದ್ಯಮಕ್ಕೆ ಭಯ ಕಾಡುತ್ತದೆ. ಹಲವು ವರ್ಷಗಳಿಂದ ಡಿಸೆಂಬರ್ ನಲ್ಲಿ ಚಿತ್ರೋದ್ಯಮ ಅನೇಕ ಗಣ್ಯರನ್ನು ಕಳೆದುಕೊಂಡಿದೆ. ಇತ್ತೀಚೆಗಷ್ಟೇ ಲೀಲಾವತಿ ಅವರನ್ನು ಕಳೆದುಕೊಂಡು ಚಿತ್ರೋದ್ಯಮ ದುಃಖದಲ್ಲಿತ್ತು. ಈಗ ಜಾಲಿ ಕೂಡ ಚಿತ್ರೋದ್ಯಮದಿಂದ ಮರೆಯಾಗಿದ್ದಾರೆ.