ಶಿವಮೊಗ್ಗ: ಜನ ಸಾಮಾನ್ಯರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ಗಳ ವಿರುದ್ದ ಸುಗ್ರೀವಾಜ್ಞೆ ಮೂಲಕ ಕ್ರಮ ಜರುಗಿಸಬೇಕಿದೆ ಎಂದು ಖಾತೆ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಿರುಕುಳದ ಕುರಿತು ನಿಶ್ಚಿತವಾಗಿ ಕ್ರಮ ತೆಗೆದುಕೊಳ್ಳಬೇಕಿದೆ. ಇವರ ವಿರುದ್ದ ಕ್ರಮಕ್ಕೆ ರಾಜ್ಯ ಸರ್ಕಾರದ ಜೊತೆ ಕೇಂದ್ರ ಸರ್ಕಾರವು ಸಹ ಕ್ರಮ ತೆಗೆದುಕೊಳ್ಳಬೇಕಿದೆ. ಎಲ್ಲವು ಸಹ ಆರ್ ಬಿ ಐ ನಿಯಮದ ಪ್ರಕಾರವೇ ಕ್ರಮ ಜರುಗಿಸಬೇಕಿದೆ. ಮೈಕ್ರೋ ಫೈನಾನ್ಸ್ಗಳು ಈಗ ಅಲ್ಲ ಎಲ್ಲಾ ಸರ್ಕಾರಗಳಿದ್ದಾಗಲೂ ಸಹ ಹೀಗೆ ವರ್ತಿಸಿದ್ದಾರೆ. ಜನರಿಗೆ ತೊಂದರೆ ಕೊಡುವವರ ವಿರುದ್ದ ಖಂಡಿತ ಶಿಸ್ತು ಕ್ರಮವನ್ನು ಸುಗ್ರೀವಾಜ್ಞೆಯ ಮೂಲಕ ಕ್ರಮ ಜರುಗಿಸಬೇಕಿದೆ ಎಂದರು. ಈಗಲು ಸಹ ದಿನದ ಬಡ್ಡಿ, ವಾರದ ಬಡ್ಡಿ, ಮೀಟರ್ ಬಡ್ಡಿ ಎಂದು ಹಾಕುತ್ತಿದ್ದಾರೆ. ಮನೆಗಳ ಬಳಿ ಬಂದು ಬಾಯಿಗೆ ಬಂದ ಹಾಗೆ ಬೈಯ್ದು ಅಪಮಾನ ಮಾಡುತ್ತಾರೆ. ಅಪಮಾನ ಸಹಿಸದೆ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಆರ್ ಬಿ ಐ ಗೆ ಮನವಿ ಮಾಡಿದ್ದೆವೆ. ಇದಕ್ಕೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
ಮಹಾಕುಂಭದ ಪುಣ್ಯಸ್ನಾನದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬ್ಗೆ ಪ್ರತಿಕ್ರಿಯಿಸಿ, ಖರ್ಗೆ ಅವರು ಬರೀ ಆಚರಣೆಯ ಬಗ್ಗೆ ಹೇಳಿಲ್ಲ. ಕೇಂದ್ರ ಸರ್ಕಾರ ಜನರ ಕಣ್ಣೊರೆಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಡಾಲರ್ ಮುಂದೆ ಭಾರತದ ರೂಪಾಯಿ ಕುಸಿತ ಆಗುತ್ತಿದೆ. ಈ ಅರ್ಥದಲ್ಲಿ ಖರ್ಗೆ ಅವರು ಮಾತನಾಡಿದ್ದಾರೆ. ಆದರೆ ಬಿಜೆಪಿಯವರಿಗೆ ಇದೆಲ್ಲ ಕಾಣುವುದಿಲ್ಲ ಎಂದರು. ಇನ್ನು ಕುಂಭಮೇಳದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದು, ಘಟನೆಯ ಸತ್ಯಾಸತ್ಯೆಯನ್ನು ತಿಳಿದುಕೊಂಡು ಸರ್ಕಾರ ನೆರವು ನೀಡಲಿದೆ ಎಂದರು.