ಹುಬ್ಬಳ್ಳಿ: 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಘಟಕದ ಅಂದಿನ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ಬಿ.ಆರ್.ರವಿಕಾಂತೇಗೌಡ ರವರು ದೂರು ಕೊಟ್ಟಿದ್ದರಲ್ಲಿ 09-12-2002 ರಂದು ಆರೋಪಿತರ ವಶದಿಂದ ಮತ್ತು ಮನೆಯಲ್ಲಿಂದ ಒಟ್ಟು 11 ಕ್ವಿಂಟಲ್ ತೂಕದ,
ಗಾಂಜಾ ತುಂಬಿದ ಒಟ್ಟು 36 ಚೀಲಗಳನ್ನು ಮತ್ತು ಸಾಗಾಟ ಮಾಡಲು ಬಳಸಿದ ಒಂದು ಸ್ಕೂಟಿ, ಒಂದು ಬುಲೆಟ್ ಮತ್ತು ಒಂದು ಲಾರಿ ಸೇರಿ ಒಟ್ಟು 24 ಲಕ್ಷ 90 ಸಾವಿರ ರೂ. ಮೌಲ್ಯದ ಗಾಂಜಾ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದು, ಈ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಕುಮಾರ ಸೂರಪ್ಪ ಶೆಟ್ಟಿ ಎನ್ನುವವನು ಪರಾರಿಯಾಗಿದ್ದನು. ಆರೋಪಿತನು ಪದೇ ಪದೇ ವಿಳಾಸವನ್ನು ಬದಲಾಯಿಸುತ್ತ ತಲೆಮರೆಸಿಕೊಂಡಿದ್ದರಿಂದ ಈ ಪ್ರಕರಣವು ನ್ಯಾಯಾಲಯದಲ್ಲಿ ಎಲ್.ಪಿ.ಸಿ. ಪ್ರಕರಣವಾಗಿತ್ತು.
ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್… ‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ
ಆರೋಪಿತನ ಪೂರ್ಣ ಹೆಸರು. ವಿಳಾಸ ಮತ್ತು ಭಾವಚಿತ್ರ ಇಲ್ಲದೇ ಇರುವದರಿಂದ ಅವನನ್ನು ಪತ್ತೆ ಮಾಡುವುದು ಇಲಾಖೆಗೆ ಸವಾಲಾಗಿತ್ತು. ಆರೋಪಿತನ ವಿರುದ್ಧ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅರೆಸ್ಟ್ ವಾರೆಂಟ್ನ್ನು ಹೊರಡಿಸಿದ್ದು, ಅದರಂತೆ ಕಾರ್ಯಪ್ರವೃತ್ತರಾದ ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಆರೋಪಿತನ ಜಾಡು ಹಿಡಿದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ನಗರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.