ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಇತ್ತೀಚೆಗೆ ಒಂದರ ಹಿಂದೊದರಂತೆ ಜೀವ ಬೆದರಿಕೆಗಳು ಬರುತ್ತಲೆ ಇವೆ. ಇದೀಗ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದ್ದ ಕಾರಣಕ್ಕೆ ಮುಂಬೈ ಪೊಲೀಸರು ರಾಯಚೂರಿನಲ್ಲಿ ಸೋಹೆಲ್ ಪಾಶಾ ಎಂಬಾತನನ್ನು ಬಂಧಿಸಿದ್ದಾರೆ. ಶಾಕಿಂಗ್ ವಿಚಾರ ಎಂದರೆ ಈತ ಸಲ್ಮಾನ್ ಖಾನ್ ಮುಂಬರುವ ಸಿನಿಮಾದ ಗೀತ ಸಾಹಿತಿ ಆಗಿದ್ದನು.
ಸಲ್ಮಾನ್ ಖಾನ್ ಅವರನ್ನು ಕೊಲ್ಲೋದಾಗಿ ಮುಂಬೈ ಸಂಚಾರ ಪೊಲೀಸರಿಗೆ ನಿರಂತರವಾಗಿ ಸಂದೇಶ ಬರುತ್ತಲೇ ಇದೆ. ನವೆಂಬರ್ 7ರಂದು ಕೂಡ ಬೆದರಿಕೆ ಬಂದಿತ್ತು. ಐದು ಕೋಟಿ ರೂಪಾಯಿ ಕೊಡದೇ ಇದ್ದರೆ ಸಲ್ಮಾನ್ ಹಾಗೂ ಸಹೋದರ ಸೋಹೆಲ್ ಖಾನ್ ರನ್ನು ಕೊಲೆ ಮಾಡುತ್ತೇವೆ ಎಂದು ಸೋಹೆಲ್ ಪಾಶಾ ಎಂಬಾತ ವಾಟ್ಸಾಪ್ ಮೂಲಕ ಬೆದರಿಕೆ ಹಾಕಿದ್ದ. ಇದಕ್ಕೆ ಸಂಬಂಧಿಸಿದಂತೆ ವೊರ್ಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಮುಂಬೈ ಪೊಲೀಸರು ನಿರಂತರವಾಗಿ ತನಿಖೆ ನಡೆಸಿದ್ದಾರೆ. ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿದಾಗ ಅದು ಕರ್ನಾಟಕದ ರಾಯಚೂರಿನ ವೆಂಕಟೇಶ್ ನಾರಾಯಣ ಎಂಬುವವರದು ಅನ್ನೋದು ಗೊತ್ತಾಗಿದೆ. ಅಲ್ಲಿ ಹೋಗಿ ನೋಡಿದಾಗ ಅವರ ಬಳಿ ಕೇವಲ ಬೇಸಿಕ್ ಸೆಟ್ ಇದ್ದು, ವಾಟ್ಸಾಪ್ ಇಲ್ಲ ಅನ್ನೋದು ಗೊತ್ತಾಗಿದೆ. ಬೇಸಿಕ್ ಸೆಟ್ಗೆ ಮೂರನೇ ತಾರೀಕಿಗೆ ವಾಟ್ಸಾಪ್ ಲಾಗಿನ್ ಒಟಿಪಿ ಬಂದಿತ್ತು ಎಂಬುದು ಗೊತ್ತಾಗಿದೆ. ವಿಚಾರಣೆ ನಡೆಸಿದಾಗ ವೆಂಕಟೇಶ್ ನಾರಾಯಣ ರಾಯಚೂರಿನ ಮಾರುಕಟ್ಟೆಗೆ ದಿನಸಿ ತರಲು ಹೋಗಿದ್ದ ಅನ್ನೋದು ಗೊತ್ತಾಗಿದೆ.
‘ನಾನು ಮಾರುಕಟ್ಟೆಗೆ ಹೋದಾಗ ಓರ್ವ ವ್ಯಕ್ತಿ ಬಂದು ಮೊಬೈಲ್ ಸರಿ ಇಲ್ಲ ನಿಮ್ಮ ಮೊಬೈಲ್ ನೀಡಿ, ಕರೆ ಮಾಡಿ ಕೊಡುತ್ತೇನೆ ಎಂದು ಕೋರಿದ್ದ’ ಎಂಬುದಾಗಿ ವೆಂಕಟೇಶ್ ನಾರಾಯಣ ಹೇಳಿದ್ದಾರೆ. ಈ ರೀತಿ ಕರೆ ಮಾಡಿದವನೇ ಸೋಹೆಲ್ ಪಾಶಾ. ನಂತರ ಮನೆಗೆ ಹೋಗಿ ಈತನ ಬಂಧಿಸಲಾಗಿದೆ. ಸದ್ಯ ಪೊಲೀಸರು ಪ್ರಶ್ನೆ ಮಾಡುತ್ತಿದ್ದಾರೆ. ಪಾಶಾ ಪಬ್ಲಿಸಿಟಿಗೆ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.