ಬೆಂಗಳೂರು:- 50 ಕೋಟಿಗೆ ಡಿಮ್ಯಾಂಡ್ ಹಾಗೂ ಬೆದರಿಕೆ ಹಾಕಿದ ಆರೋಪ ಮಾಡಿದ ಉದ್ಯಮಿ ವಿಜಯ್ ಟಾಟಾ ಅವರು, ಇನ್ನೂ ಯಾವುದೇ ದಾಖಲೆ ಸಲ್ಲಿಸದ ಹಿನ್ನೆಲೆ ಕುಮಾರಸ್ವಾಮಿಗೆ ಸಧ್ಯ ತನಿಖೆ ತಲೆಬಿಸಿ ಇಲ್ಲ ಎನ್ನಲಾಗಿದೆ.
ದೂರುದಾರ ವಿಜಯ್ ಟಾಟಾ, ಅಮೃತಹಳ್ಳಿ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ಅಷ್ಟೇ ನೀಡಿದ್ದಾರೆ ಹೊರತು ಯಾವುದೇ ಪ್ರಾಥಮಿಕ ದಾಖಲಾತಿ ನೀಡಿಲ್ಲವೆಂಬುವುದು ತಿಳಿದು ಬಂದಿದೆ.
ಹೀಗಾಗಿ ಸದ್ಯ ಹೆಚ್ಡಿ ಕುಮಾರಸ್ವಾಮಿಗೆ ಯಾವುದೇ ತನಿಖೆ ತಲೆಬಿಸಿ ಇಲ್ಲ. ಪ್ರಾಥಮಿಕ ದಾಖಲಾತಿ ಸಿಗದೆ ಮುಂದಿನ ತನಿಖೆ ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಪ್ರಾಥಮಿಕ ದಾಖಲಾತಿಗಳನ್ನು ನೀಡುವಂತೆ ಉದ್ಯಮಿ ವಿಜಯ್ ಟಾಟಾಗೆ ಪೊಲೀಸರು ಸೂಚಿಸಿದ್ದಾರೆ. 50 ಕೋಟಿ ರೂ. ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿದ್ದಾರೆಂದು ಇತ್ತೀಚೆಗೆ ವಿಜಯ್ ಟಾಟಾ ಆರೋಪ ಮಾಡಿದ್ದರು. ಅವರ ದೂರಿನ ಅನ್ವಯ ಮಾಜಿ ಎಂಎಲ್ಸಿ ರಮೇಶ್ ಗೌಡ ಹಾಗೂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇನ್ನು ರಮೇಶ್ ಗೌಡ ಕೂಡ 5 ಕೋಟಿ ರೂ. ಡಿಮ್ಯಾಂಡ್ ಮಾಡಿ ಬೆದರಿಸಿದ್ದಾರೆ ಅಂತ ಕೂಡ ದೂರು ನೀಡಲಾಗಿತ್ತು. ರಮೇಶ್ ಗೌಡ ವಾಟ್ಸಪ್ ಚಾಟ್ ಕೂಡ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ವಾಟ್ಸಪ್ ಚಾಟ್ ಹಾಗೂ ಫೋನ್ ಕರೆ ಬಗ್ಗೆ ದೂರುದಾರ ವಿಜಯ್ ಟಾಟಾ ಯಾವುದೇ ದಾಖಲಾತಿ ನೀಡಿಲ್ಲ. ಪೊಲೀಸರ ಮುಂದೆ ಹಾಜರಾದ ವೇಳೆ ಪ್ರಾಥಮಿಕ ದಾಖಲೆ ಒದಗಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.