ಮಂಡ್ಯ :- ಕೂಲಿ ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿ ಸಾಕ್ಷ್ಯನಾಶ ಮಾಡಿದ ಆರೋಪಿಗೆ ಮಂಡ್ಯ ನಗರದ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಮತ್ತು 40 ಸಾವಿರ ರೂ. ದಂಡವನ್ನು ವಿಧಿಸಿದೆ.
ಚಾಮರಾಜನಗರದಲ್ಲಿ ಭಾರೀ ಮಳೆ: ಕೆರೆಯಂತಾದ ರಸ್ತೆ, ವಾಹನ ಸವಾರರು ಪರದಾಟ!
ಮಳವಳ್ಳಿ ತಾಲೂಕಿನ ಕೋಟೆಬೀದಿ ನಿವಾಸಿ ಮಾದೇಶ(34) ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದು, ದಂಡವನ್ನು ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸಾದಾ ಶಿಕ್ಷೆ ಹಾಗೂ 7 ವರ್ಷಗಳ ಕಠಿಣ ಸಜೆ ಮತ್ತು 20 ಸಾವಿರ ರೂ. ದಂಡವನ್ನು ವಿಧಿಸಿ ನ್ಯಾಯಾಧೀಶರಾದ ನಿರ್ಮಲ.ಕೆ ಅವರು ತೀರ್ಪು ನೀಡಿದ್ದಾರೆ.
ಪ್ರಕರಣದ ವಿವರ
ಶಂಕರ ಮತ್ತು ಮಾದೇಶ ಮಳವಳ್ಳಿ ಟೌನ್ ಕೋಟೆ ಬೀದಿ ನಿವಾಸಿಗಳಾಗಿದ್ದರು. ಇವರು ಕೂಲಿ ಕೆಲಸ ಮಾಡುತ್ತಾ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿಡಘಟ್ಟ ಗ್ರಾಮದ ಸಂತೆಮಾಳದಲ್ಲಿ ಇತರೆ ಕೂಲಿಗಳ ಜತೆ ಜೀವನೋಪಾಯ ಮಾಡಿಕೊಂಡಿದ್ದರು.
ಇದೇ ವೇಳೆ ಶಂಕರ ಆರೋಪಿ ಮಾದೇಶನನ್ನು ತನ್ನ ಜೊತೆ ಕೆಲಸಕ್ಕೆ ಕರೆದುಕೊಂಡು ಹೋಗಿ, ಕೂಲಿ ಕೆಲಸದಿಂದ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ಆರೋಪಿ ಮಾದೇಶನಿಗೆ ಕೊಟ್ಟು ಹೆಚ್ಚು ಹಣವನ್ನು ತಾನೇ ಇಟ್ಟುಕೊಳ್ಳುತ್ತಿದ್ದ. ಇದರಿಂದ ಕೂಪಿತನಾಗುತ್ತಿದ್ದ ಮಾದೇಶ ಶಂಕರ ನಡುವೆ ಆಗಾಗ ಜಗಳವಾಗುತ್ತಿತ್ತು.
ಇದೇ ದ್ವೇಷವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದ ಮಾದೇಶ ಶಂಕರ ತನ್ನ ಪತ್ನಿ ಮತ್ತು ಇತರ ಕೂಲಿಗಳ ಜತೆ ಸಂತೆಮಾಳದಲ್ಲಿ ಮಲಗಿದ್ದಾಗ ಮಾದೇಶ ಶಂಕರನನ್ನು ಎಬ್ಬಿಸಿ ಕೂಲಿ ಹಣದಲ್ಲಿ ವಂಚನೆ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿ ಜಗಳ ತೆಗೆದಿದ್ದಾನೆ. ನಂತರ ಕೊಲೆ ಮಾಡಿ, ಮೃತದೇಹವನ್ನು ಎಳೆದುಕೊಂಡು ಹೋಗಿ ಅಲ್ಲಿಯೇ ಸಮೀಪದಲ್ಲಿದ್ದ ಹುಣಸೆಮರದ ಬಳಿ ಬಿಟ್ಟು ಮಾದೇಶ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣದ ತನಿಖೆಯನ್ನು ಮದ್ದೂರು ಪೊಲೀಸ್ ಠಾಣೆಯ ಅಂದಿನ ಸಿಪಿಐ ಕೆ.ಆರ್.ಪ್ರಸಾದ್ ಸಮಗ್ರ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಅಭಿಯೋಜನೆ ಪರವಾಗಿ ಸರಕಾರಿ ವಕೀಲೆ ಜಯಶ್ರೀ ಎಸ್.ಶಣೈ ವಾದ ಮಂಡಿಸಿದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ