ಮಂಡ್ಯ ; ಮಂಡ್ಯ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಗರದ ಸ್ವರ್ಣಸಂದ್ರ ಬಳಿಯ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್ ನ ಮರಕ್ಕೆ ಬೈಕ್ ಡಿಕ್ಕಿಯಾಗಿ, ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ.
ಮಂಡ್ಯ ತಮಿಳುನಾಡು ಮೂಲದ ಅರುಣ್ ಕುಮಾರ್ ಮೃತ ಯುವಕನಾಗಿದ್ದು, ಮತ್ತೊರ್ವ ಜಯವೀರ್ಗೆ ಗಂಭೀರ ಗಾಯಗಳಾಗಿವೆ. ಹೊಸೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್’ಗೆ ಡಿಕ್ಕಿಯಾಗಿದೆ. ಡಿವೈಡರ್ ನ ಮೇಲತ್ತಿ ಮರಕ್ಕೆ ಡಿಕ್ಕಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳ ಎದುರೇ ವಿಲವಿಲನೇ ಒದ್ದಾಡಿ ಪ್ರಾಣ ಬಿಟ್ಟ ತಾಯಿ
ಇನ್ನೊಂದೆಡೆ ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ. ಮಳವಳ್ಳಿ ಪಟ್ಟಣದ ಹೊರ ಹೊಲಯದ ಕೊಳ್ಳೆಗಾಲ ರಸ್ತೆಯ ಕಣಿಗಲ್ ಹಳ್ಳದ ಬಳಿ ಅವಘಡ ನಡೆದಿದೆ. ವೇಗವಾಗಿ ಬರುತ್ತಿದ್ದ ಬೊಲೆರೊ ವಾಹನ ಸ್ಕೂಟರ್ ಗೆ ಡಿಕ್ಕಿ ಹೊಡೆದು, ಕುಂದೂರು ಗ್ರಾಮದ ಶಿಲ್ಪ( 39) ಎಂಬುವರು ಮೃತಪಟ್ಟಿದ್ದಾರೆ. 7 ವರ್ಷದ ಅನನ್ಯ ಹಾಗೂ 5 ವರ್ಷದ ಮಾನ್ಯಗೆ ಗಾಯಗಳಾಗಿವೆ.
ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರುವ ವೇಳೆ ದುರ್ಘಟನೆ ನಡೆದಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದು ಶಿಲ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.