ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (Road Transport and Highways Ministry) 2025ರ ಅಕ್ಟೋಬರ್ 1ರ ಬಳಿಕ ನಿರ್ಮಾಣವಾಗುವ ಎಲ್ಲಾ ಹೊಸ ಟ್ರಕ್ಗಳಲ್ಲಿ (Truck) ಚಾಲಕರಿಗೆ ಎಸಿ (AC Cabin) ಕ್ಯಾಬಿನ್ಗಳನ್ನು ಕಡ್ಡಾಯ ಮಾಡಿ ಅಧಿಸೂಚನೆ ಹೊರಡಿಸಿದೆ
ಅಕ್ಟೋಬರ್ 1, 2025 ರಂದು ಅಥವಾ ನಂತರ ತಯಾರಿಸಿದ ಎಲ್ಲಾ ವಾಹನಗಳಿಗೆ (Vehicles) ಎನ್2 ಮತ್ತು ಎನ್3 ವರ್ಗದ ಕ್ಯಾಬಿನ್ ಗೆ ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಹೇಳಿದೆ.
ಈ ಹಿಂದೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಟ್ರಕ್ ಚಾಲಕರ (Driver) ಹಿತದೃಷ್ಟಿಯಿಂದ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಲಾಗುತ್ತದೆ. ಟ್ರಕ್ ಡ್ರೈವರ್ ಕಂಪಾರ್ಟ್ಮೆಂಟ್ಗಳಲ್ಲಿ ಹವಾನಿಯಂತ್ರಿತ ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ. ಟ್ರಕ್ಗಳನ್ನು ಓಡಿಸುವ ಚಾಲಕರು ಈ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದರು.
ನಮ್ಮ ಚಾಲಕರು 43% -47% ರಷ್ಟು ಕಠಿಣ ತಾಪಮಾನದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಆಗ ಚಾಲಕರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾವು ಊಹಿಸಬೇಕು. ನಾನು ಸಚಿವನಾದ ಕೂಡಲೇ ಎಸಿ ಕ್ಯಾಬಿನ್ ಪರಿಚಯಿಸಲು ಉತ್ಸುಕನಾಗಿದ್ದೆ. ಆಗ ಟ್ರಕ್ಗಳ ಬೆಲೆ ಹೆಚ್ಚಾಗುತ್ತದೆ ಎಂದು ಕೆಲವರು ಇದನ್ನು ವಿರೋಧಿಸಿದ್ದರು. ಈಗ ನಾನು ಡ್ರೈವರ್ ಕ್ಯಾಬಿನ್ಗಳಲ್ಲಿ ಎಸಿ ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ ಎಂದು ಹೇಳಿದ್ದರು.
ಭಾರತದಲ್ಲಿ ಚಾಲಕರ ಕೊರತೆಯಿದೆ. ಇದರ ಪರಿಣಾಮವಾಗಿ ಈಗ ಇರುವ ಚಾಲಕರು ದಿನದಲ್ಲಿ 14-16 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇತರ ದೇಶಗಳಲ್ಲಿ, ಟ್ರಕ್ ಚಾಲಕರು ಇಷ್ಟು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವುದಕ್ಕೆ ನಿರ್ಬಂಧವಿದೆ.
ಭಾರತದಲ್ಲಿ ಟ್ರಕ್ಗಳನ್ನು ಚಾಲಕನ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಂಡಿಲ್ಲ. ಆದರೆ ಅಮೆರಿಕದಲ್ಲಿ ಸುರಕ್ಷತೆ ಮತ್ತು ಆರಾಮ ವೈಶಿಷ್ಟ್ಯಗಳು ತಯಾರಕರಿಗೆ ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ ಎಂದು ಅವರು ಹೇಳಿದರು.