ಬೆಂಗಳೂರು:- ಅನುದಾನ ಕೊರತೆಯಿಂದ ವಿವಿಗಳ ಮುಚ್ಚಬೇಡಿ ಎಂದು ಸಿಎಂಗೆ ಮಾಜಿ ಸಿಎಂ ಬೊಮ್ಮಾಯಿ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ನೂತನ ವಿಶ್ವ ವಿದ್ಯಾಲಯಗಳನ್ನು ಅನುದಾನದ ಕೊರತೆ ನೆಪ ಹೇಳಿ ಮುಚ್ಚಲು ಮುಂದಾಗುತ್ತಿರುವುದು ಹಿಂದುಳಿದ ಜಿಲ್ಲೆಗಳು ಮತ್ತು ಬಡ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದಂತಾಗುತ್ತದೆ.
ಆದ್ದರಿಂದ ನೂತನ ವಿಶ್ವ ವಿದ್ಯಾಲಯಗಳನ್ನು ಅನುದಾನದ ಕೊರತೆ ನೆಪದಲ್ಲಿ ಮುಚ್ಚುವ ಪ್ರಸ್ತಾಪವನ್ನು ಕೈಬಿಡುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಇನ್ನೂ ಹೊಸ ಸರ್ಕಾರ ಬಂದು ಬೆಳಗಾವಿಯಲ್ಲಿ ಪ್ರಥಮ ಅಧಿವೇಶನ ನಡೆಸುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಚರ್ಚೆ ಮತ್ತು ಸಮರ್ಪಕವಾದ ಉತ್ತರವನ್ನು ಉತ್ತರ ಕರ್ನಾಟಕದ ಜನರು ನಿರೀಕ್ಷೆ ಮಾಡಿದ್ದರು. ಆದರೆ, ಯಾವುದೇ ವಿಶೇಷವಾಗಿರುವ ಅಭಿವೃದ್ಧಿ ಪರ ನಿರ್ಣಯಗಳನ್ನು ಸರ್ಕಾರ ಘೋಷಿಸದೇ ಈಗಾಗಲೇ ಇರುವಂತಹ ಕಾರ್ಯಕ್ರಮಗಳನ್ನು ಪುನಃ ಘೋಷಿಸಿ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.
ಉತ್ತರ ಕರ್ನಾಟಕ ಅಷ್ಟೇ ಅಲ್ಲ, ಇಡೀ ಕರ್ನಾಟಕದಲ್ಲಿ ಯಾವುದೇ ಮೂಲ ಸೌಕರ್ಯಗಳ ಕಾಮಗಾರಿಗಳು ಪ್ರಾರಂಭವಾಗದಿರುವ ಕಟು ಸತ್ಯದ ಅನುಭವ ಜನರಿಗೆ ಬಂದಿದೆ. ಕೃಷ್ಣಾ ಮೇಲ್ದಂಡೆ ಹಂತ 3ರ 130 ಟಿಎಂಸಿ ನೀರು ಬಳಕೆ ಮಾಡಲು ನಮ್ಮ ಸರ್ಕಾರ ಪ್ರಾರಂಭ ಮಾಡಿರುವ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಈ ವರ್ಷ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡದಿರುವುದು ಉತ್ತರ ಕರ್ನಾಟಕದ ಬಗ್ಗೆ ತಮ್ಮ ಸರ್ಕಾರಕ್ಕೆ ಇರುವ ಅಸಡ್ಡೆ ಭಾವನೆ ಗೊತ್ತಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅದೇ ರೀತಿ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಡಿಪಿಆರ್ಗೆ ಅನುಮೋದನೆ ಕೊಟ್ಟಿದ್ದು, ಅರಣ್ಯ ಇಲಾಖೆಯ ಅನುಮತಿ ಪಡೆಯಲು ತೆಗೆದುಕೊಂಡ ಕ್ರಮದ ಬಗ್ಗೆ ವಿವರಣೆಯನ್ನು ಕೊಡದಿರುವುದು ನೋಡಿದರೆ ತಮ್ಮ ಐದು ವರ್ಷದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ತಮ್ಮ ಆಸಕ್ತಿ ಇಲ್ಲದಂತೆ ಕಾಣಿಸುತ್ತದೆ. ತುಂಗಭದ್ರ ಸಮತೋಲನ ಜಲಾಶಯಕ್ಕೆ ನಮ್ಮ ಸರ್ಕಾರ ಡಿಪಿಆರ್ ಮಾಡಿದೆ. ಕೂಡಲೇ ನೆರೆ ರಾಜ್ಯಗಳೊಂದಿಗೆ ಮಾತನಾಡಿ, ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.