ನವದೆಹಲಿ:- ಆಮ್ ಆದ್ಮಿ ಪಕ್ಷ ಗೆದ್ದರೆ ದೇವಸ್ಥಾನಗಳ ಅರ್ಚಕರ ಗೌರವಧನ 18 ಸಾವಿರ ರೂ.ಗೆ ಏರಿಕೆ ಮಾಡಲಾಗುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಮುಂಬರಲಿರುವ ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದರೆ ದೇವಸ್ಥಾನಗಳ ಅರ್ಚಕರು, ಗುರುದ್ವಾರಗಳಲ್ಲಿನ ಗ್ರಂಥಿಗಳ ಗೌರವಧನ 18 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದರು.
ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ, ದೇವಸ್ಥಾನಗಳಲ್ಲಿ ಕೆಲಸ ಮಾಡುವ ಎಲ್ಲಾ ಅರ್ಚಕರು ಮತ್ತು ನಗರದಾದ್ಯಂತ ಗುರುದ್ವಾರಗಳಲ್ಲಿ ಗ್ರಂಥಿಗಳಿಗೆ ತಿಂಗಳಿಗೆ 18,000 ರೂಪಾಯಿಗಳನ್ನು ನೀಡುವುದಾಗಿ ಎಎಪಿ ಭರವಸೆ ನೀಡಿದೆ. ಈ ನಿಟ್ಟಿನಲ್ಲಿ ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಸಿಎಂ ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವನಿ ಯೋಜನೆ ಮತ್ತು ಅರ್ಚಕರಿಗೆ ಗೌರವಧನ ನೀಡುವ ಯೋಜನೆಯನ್ನು ವಿರೋಧಿಸಬೇಡಿ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ. ಮಹಿಳೆಯರು, ದಲಿತರು ಮತ್ತು ಹಿರಿಯ ನಾಗರಿಕರು ಸೇರಿದಂತೆ ನಿರ್ದಿಷ್ಟ ವರ್ಗದ ಮತದಾರರನ್ನು ಗುರಿಯಾಗಿಸಿಕೊಂಡು ಪಕ್ಷ ಇದುವರೆಗೆ ನಾಲ್ಕು ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ.
ಅರ್ಚಕರಿಗಾಗಿ ಇಂತಹ ಯೋಜನೆಗಳನ್ನು ಘೋಷಿಸಿದ ದೇಶದ ಮೊದಲ ಪಕ್ಷ ಎಎಪಿ ಎಂದು ಕೇಜ್ರಿವಾಲ್ ಹೇಳಿದರು. ದೇಶದ ಯಾವ ಪಕ್ಷವೂ ಇಂತಹ ಯೋಜನೆ ತಂದಿಲ್ಲ ಎಂದರು. ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಮಂಗಳವಾರ ಕನ್ನಾಟ್ ಪ್ಲೇಸ್ನಲ್ಲಿರುವ ಹನುಮಾನ್ ದೇವಾಲಯದಲ್ಲಿ ಪ್ರಾರಂಭಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದರು.