ಪುಣೆ: ಮಾನವ ಹಕ್ಕುಗಳ ಕಾರ್ಯಕರ್ತರಂತೆ ಪೋಸ್ ಕೊಟ್ಟ ಮೂವರು ಅಪರಿಚಿತ ವ್ಯಕ್ತಿಗಳು 21ರ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರ (Maharashtra Pune) ರಾಜ್ಯದ ಪುಣೆಯಲ್ಲಿ (Pune) ನಡೆದಿದೆ.
ಯುವತಿಯು ನಗರದ ಬೋಪದೇವ್ ಘಾಟ್ (Bopdev Ghat) ಪ್ರದೇಶಕ್ಕೆ ಸ್ನೇಹಿತನೊಂದಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ. ಬಂಧಿತನನ್ನು 36 ವರ್ಷದ ಕೊಂಡ್ವಾ ನಿವಾಸಿ ರಾಜೇ ಖಾನ್ ಕರೀಂ ಪಠಾಣ್ ಎಂದು ಗುರುತಿಸಲಾಗಿದೆ
ರಾತ್ರಿ 11 ಗಂಟೆ ವೇಳೆಗೆ ಸಂತ್ರಸ್ತ ಯುವತಿ ಆಕೆಯ ಸ್ನೇಹಿತನೊಂದಿಗೆ ಬೋಪ್ದೇವ್ ಘಾಟ್ ಪ್ರದೇಶಕ್ಕೆ ತೆರಳಿದ್ದಳು. ಈ ವೇಳೆ ಅಲ್ಲಿಗೆ ಬಂದ ಮೂವರು ಆರೋಪಿಗಳ ಪೈಕಿ ಪಠಾಣ್ ಎಂಬುವವನು ಮಾನವ ಹಕ್ಕುಗಳ ಕಾರ್ಯಕರ್ತನಂತೆ ಪೋಸ್ ಕೊಟ್ಟಿದ್ದಾನೆ. ಈ ಪ್ರದೇಶದಲ್ಲಿ ದಂಪತಿಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿ ಇಬ್ಬರ ಫೋಟೋಗಳನ್ನು ತೆಗೆದುಕೊಂಡಿದ್ದಾನೆ.
ನಂತರ ಆರೋಪಿ ಪಠಾಣ್ ಯುವತಿಯನ್ನು ಬೆದರಿಸಿ, ತನ್ನ ಕಾರಿಗೆ ಬಲವಂತವಾಗಿ ಹತ್ತಿಸಿದ್ದಾನೆ. ಅಲ್ಲಿದ್ದ ಯುವತಿಯ ಸ್ನೇಹಿತನನ್ನು ಥಳಿಸಿದ್ದಾನೆ. ಆಕೆಯನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಪಠಾಣ್ ಕಾರನ್ನು ನಿಲ್ಲಿಸಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ.