ಮಡಿಕೇರಿ:- 2 ಮಕ್ಕಳು ಸಾಕೆಂದು ಲ್ಯಾಪ್ರೊಸ್ಕೋಪಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜರುಗಿದೆ.
28 ವರ್ಷದ ಶಾಂತಿ ಮೃತ ಬಾಣಂತಿ. ಶಾಂತಿ ಅವರು, ಮಂಗಳವಾರ ತಮ್ಮ ಗಂಡ ಹಾಗೂ 2 ತಿಂಗಳು 10 ದಿನದ ಮಗುವಿನೊಂದಿಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗಮಿಸಿದ್ದಾರೆ. ಲ್ಯಾಪ್ರೊಸ್ಕೋಪಿ ಎಂಬ ಶಸ್ತ್ರಚಿಕಿತ್ಸೆಯಾಗುತ್ತಿದ್ದ ಹಿನ್ನೆಲೆ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿಸಲು ಮುಂದಾಗಿದ್ದಾರೆ. ಇದೇ ದಿನ ಸುಮಾರು 14 ಬಾಣಂತಿಯರು ಫ್ಯಾಮಿಲಿ ಪ್ಲ್ಯಾನಿಂಗ್ಗೆ ನೋಂದಣಿ ಮಾಡಿಕೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಆಪರೇಷನ್ ಮಾಡಿಸಲು ಶಾಂತಿ ಅವರು ಮುಂದಾದ ವೇಳೆ ಅಸ್ವಸ್ಥತೆಯಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ವೈದ್ಯಾಧಿಕಾರಿಗಳು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲು ಮುಂದಾಗಿದ್ದಾರೆ. ಬಾಣಂತಿ ಮಹಿಳೆ ಶಾಂತಿಯನ್ನು ಮಡಿಕೇರಿ ಆಸ್ಪತ್ರೆಗೆ ರವಾನೆ ಮಾಡುವ ಸಂದರ್ಭದಲ್ಲಿ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.