ಚಾಮರಾಜನಗರ : ವಿಷಪೂರಿತ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಅಂಕಣಾಪುರ ಗ್ರಾಮದಲ್ಲಿ ನಡೆದಿದೆ. ಅಂಕಣಾಪುರ ಗ್ರಾಮದ ಸುಜಾತ(37) ಎಂಬಾಕೆ ಮೃತ್ತ ದುರ್ದೈವಿ.
ಮೃತ ಸುಜಾತ ಎಂದಿನಂತೆ ಸೋಮಸುಂದರಂ ಎನ್ನುವರ ತೋಟದ ಕೆಲಸಕ್ಕೆ ಹೋಗಿ ಅರಿಶಿನ ಬಿಡಿಸುವಾಗ ಸುಜಾತ ಎಡಗಾಲಿಗೆ ವಿಷಪೂರಿತ ಹಾವು ಕಚ್ಚಿದೆ. ಈ ವೇಳೆ ಆಕೆ ಪ್ರಜ್ಞೆ ತಪ್ಪಿದ್ದಾರೆ. ಕೂಡಲೆ ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರು ಈಕೆಯನ್ನು ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೋಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ವಿಷಪೂರಿತ ಹಾವು ಕಡಿದ ಪರಿಣಾಮ ವಿಷ ಏರಿದ್ದು ಚಿಕಿತ್ಸೆ ಫಲಕಾರಿಯಾಗದೇ ಸುಜಾತ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಶವವನ್ನು ಅಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಿದರು.