ಕಾರವಾರ: ನೌಕಾ ನೆಲೆಯ ಸರಹದ್ದು ವ್ಯಾಪ್ತಿಯಲ್ಲಿ ಟ್ರ್ಯಾಕರ್ ಅಳವಡಿಸಿದ ರಣ ಹದ್ದು ಪ್ರತ್ಯಕ್ಷವಾಗಿದೆ. ಕಾರವಾರದ ನದಿ ದಡದಲ್ಲಿ ಸ್ಥಳೀಯರು ಇದರ ಫೋಟೋ ತೆಗೆದು ನೌಕಾದಳದ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಣಹದ್ದಿನ ದೇಹದ ಮೇಲೆ ಟ್ರ್ಯಾಕರ್ ಅಳವಡಿಸಲಾಗಿದ್ದು, ಕಾಲುಗಳಿಗೆ ಟೇಪ್ಗಳ ಬಳೆಗಳನ್ನು ಅಳವಡಿಸಲಾಗಿದೆ. ಹೀಗಾಗಿ ರಣಹದ್ದಿನ ಮೂಲಕ ಬೇಹುಗಾರಿಕೆಯನ್ನು ಶತ್ರು ರಾಷ್ಟ್ರಗಳು ನಡೆಸುತ್ತಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.
ಈ ಹದ್ದನ್ನು ಹಿಡಿಯಲು ಪ್ರಯತ್ನಿಸಿದರೂ ಸಿಗದೇ ಹಾರಿ ಹೋಗಿದೆ. ಈ ಹಿಂದೆ ಕದಂಬ ನೌಕಾನೆಲೆಯಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಕಾರ್ಮಿಕರನ್ನು ಬಳಸಿ ಶತ್ರು ರಾಷ್ಟ್ರವು ಕದಂಬ ನೌಕಾನೆಲೆಯ 2ನೇ ಹಂತದ ಕಾಮಗಾರಿ ಹಾಗೂ ಯುದ್ಧ ಹಡಗುಗಳ ಬಗ್ಗೆ ಮಾಹಿತಿ ಪಡೆದಿದ್ದರು. ಈ ಪ್ರಕರಣ ಸಂಬಂಧ 5 ಜನರನ್ನು ಬಂಧಿಸಲಾಗಿತ್ತು.
ನಂತರ ರಾತ್ರಿ ನಿಷೇಧಿತ ನೌಕಾನೆಲೆಯ ಪ್ರದೇಶದಲ್ಲಿ ದ್ರೋಣ್ ಕ್ಯಾಮೆರಾ ಹಾರಿಸಿದ್ದು ಇದರ ಬೆನ್ನಲ್ಲೇ ಟ್ರ್ಯಾಕರ್ ಅಳವಡಿಸಿದ ಹದ್ದು ಹಾರಾಟ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೆಲವರು ಸಂಶೋಧಕರು ಗಣತಿಗಾಗಿ ಈ ರೀತಿ ಟ್ರ್ಯಾಕರ್ ಹಾಕಿರಬಹುದಾ ಅಥವಾ ಇನ್ಯಾವುದೇ ಕಾರಣಕ್ಕಾ ಎಂಬುದರ ಬಗ್ಗೆ ತನಿಖೆ ನಡೆಯುತಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.